ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲ ಗ್ರಾಮಗಳೂ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ

Vishwanath S
Updated On : 19 Feb 2014, 11:20 am

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶವನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ತರುವ ಉದ್ದೇಶವಿದೆ. ಹಾಲಿ ಕುಂಸಿ ಸುತ್ತಮುತ್ತಲಿನ 34 ಹಳ್ಳಿಗಳಿಗೆ ಗಾಜನೂರು ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
 ಯೋಜನೆಯ ನೀಲನಕ್ಷೆ ಸಿದ್ಧವಾಗುತ್ತಿದೆ. ಈ ಯೋಜನೆಯ ವೆಚ್ಚ ಗರಿಷ್ಠ 40 ಕೋಟಿ ರು. ಆಗಬಹುದು ಎಂದ ಅವರು, ಇನ್ನೂ ಐದಾರು ಕಡೆ ಬಹುಗ್ರಾಮ ಕುಡಿವ ನೀರು ಯೋಜನೆ ಜಾರಿ ಮಾಡಲಾಗುವುದು. ಉಂಬ್ಳೇಬೈಲು, ಹೊಳೆಬೆನವಳ್ಳಿ, ಸಂತೆಕಡೂರು, ಬುಳ್ಳಾಪುರ ಸುತ್ತಮುತ್ತಲಿನ ಗ್ರಾಮಗಳು ಇದರಲ್ಲಿ ಸೇರಿವೆ. ಈಗಾಗಲೇ ಲಿಂಗನಮಕ್ಕಿಯಿಂದ ಸಾಗರಕ್ಕೆ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಈ ಮಾರ್ಗದ ಹಳ್ಳಿಗಳಿಗೂ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.
 ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಬರಬಹುದಾದ ಕುಡಿಯುವ ನೀರಿನ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಸೊರಬಕ್ಕೆ ಶರಾವತಿ: ಲಿಂಗನಮಕ್ಕಿ ಜಲಾಶಯದಿಂದ ಸೊರಬಕ್ಕೆ ಕುಡಿಯುವ ನೀರು ಒದಗಿಸುವ ಪ್ರಯತ್ನ ನಡೆಸಿದ್ದೇವೆ. ಜಡೆ ಗ್ರಾಮದ ಸುತ್ತಮುತ್ತ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ವರದಿ ಬಂದಿದೆ. ಈ ಪ್ರದೇಶವನ್ನು ಹೆಚ್ಚು ಕೇಂದ್ರೀಕರಿಸಲಾಗುವುದು. ಬೇಸಿಗೆ ಎದುರಿಸಲು ಸರ್ಕಾರಕ್ಕೆ 20 ಕೋಟಿ ರು. ಪ್ರಸ್ತಾವನೆ ಕಳುಹಿಸಿದ್ದೇವೆ. ಕೊಳವೆ ಬಾವಿ, ತೆರೆದ ಬಾವಿಗಳು ವಿಫಲವಾಗಿದ್ದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಈ ಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆಯಲಾಗುವುದು ಎಂದರು.
ಸಹಾಯವಾಣಿ: ಕುಡಿಯುವ ನೀರಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಸಹಾಯವಾಣಿ ಸ್ಥಾಪಿಸುವ ಸಿದ್ಧತೆ ನಡೆಯುತ್ತಿದೆ. ಇನ್ನೆರಡು ವಾರದಲ್ಲಿ ದೂರವಾಣಿ ಸಂಖ್ಯೆ ತಿಳಿಸಲಾಗುವುದು ಎಂದು ಸಿಇಓ ಸಸಿಕಾಂತ್ ಸೆಂಥಿಲ್ ಹೇಳಿದರು.
ಪೋನ್ ಮಾಡಿ ಸಮಸ್ಯೆ ಹೇಳಿದರೆ ಅದನ್ನು ಧ್ವನಿಮುದ್ರಿಸಿಕೊಂಡು ಕೂಡಲೇ ಸ್ಪಂದಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement