ಕತ್ತಲೆಯಲ್ಲಿ ಹುಡೋಡಿ ಗ್ರಾಮ
ಕ.ಪ್ರ.ವಾರ್ತೆ , ಹೊಸನಗರ , ಫೆ.19
'ಸ್ವಾಮೀ.. ವಿದ್ಯುತ್ ಯೋಜನೆಗಾಗಿ ಸಕಲ ತ್ಯಾಗ ಮಾಡಿ ಸಂತ್ರಸ್ತರಾಗಿದ್ದೇವೆ. ಕಾಲುಬುಡದವರೆಗೆ ಹಿನ್ನೀರು ವ್ಯಾಪಿಸಿ ಸಂಕಷ್ಟ ಅನುಭವಿಸುತ್ತಿರುವ ನಮ್ಮೂರಿಗೆ ಕರೆಂಟ್ ಇನ್ನೂ ಬಂದಿಲ್ಲ. 36 ವರ್ಷ ಆಯ್ತು ವಿದ್ಯುತ್ ಸೌಲಭ್ಯಕ್ಕೆ ಬೇಡಿಕೆಯಿಟ್ಟು. ಆದರೆ ಇಂದಿಗೂ ನಮಗೆ ಚಿಮಣಿಯೇ ಬೆಳಕಿನ ಆಧಾರವಾಗಿದೆ...'
ಹೀಗೆಂದು ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಹುಡೋಡಿ ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ. ಮಾತ್ರವಲ್ಲ ಮೂಲಭೂತ ಸೌಕರ್ಯದಿಂದ ತಡಕಾಡುತ್ತಿರುವ ಅಲ್ಲಿನ ಕುಟುಂಬಗಳಿಗೆ ಬದುಕುವುದೇ ದೊಡ್ಡ ಸಾಹಸ ಎಂಬಂತಾಗಿದೆ.
ಗ್ರಾಮದ ಅವ್ಯವಸ್ಥೆ: ವಾರಾಹಿ ಯೋಜನೆಯಡಿ ಮಾಣಿ, ಚಕ್ರಾ-ಸಾವೇಹಕ್ಲು ಜಲಾಶಯದ ನಂತರ ಅಳಿದುಳಿದ ಗ್ರಾಮಗಳಲ್ಲಿ ಹುಡೋಡಿ ಕೂಡ ಒಂದು. ಇತ್ತ ಬದುಕಲು ಆಗದೆ ಅತ್ತ ಗ್ರಾಮ ಬಿಟ್ಟು ಹೋಗಲಾಗದೆ ಅಲ್ಲೆ ಬದುಕುವ ಅನಿವಾರ್ಯತೆ. ರಸ್ತೆ, ನೀರು, ಸೇರಿದಂತೆ ಯಾವುದೇ ಸೌಲಭ್ಯ ಹುಡೋಡಿಯಲ್ಲಿಲ್ಲ. ಇನ್ನು ನಾಡಿನ ವಿದ್ಯುತ್ಗಾಗಿ ತಮ್ಮದೆಲ್ಲ ಆಸ್ತಿ ತ್ಯಾಗ ಮಾಡಿದ ಹುಡೋಡಿಗೆ ಇನ್ನೂ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಚಿಮಣಿ ಮಂದ ಬೆಳಕಿನಲ್ಲೆ ಕತ್ತಲು ಕರಗಿಸುವ ಸಾಹಸ ಮಾತ್ರ ತಪ್ಪುತ್ತಿಲ್ಲ.
ಈ ನಕ್ಸಲ್ಬಾಧಿತ ಗ್ರಾಮದಲ್ಲಿ 10 ಕುಟುಂಬಗಳಿವೆ. ವಿದ್ಯುತ್ ವ್ಯವಸ್ಥೆ ಇಲ್ಲದೆ ತಮ್ಮ ಮಕ್ಕಳನ್ನು ನೆಂಟರಿಷ್ಟರ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ಇದು ಮೊಬೈಲ್ ಕಾಲ. ಕೆಲ ಕುಟುಂಬಗಳು ಸಂಪರ್ಕಕ್ಕಾಗಿ ಮೊಬೈಲ್ ಇಟ್ಟುಕೊಂಡಿದ್ದಾರೆ. ಮೊಬೈಲ್ ಚಾರ್ಜ್ಗೆ ಮಾಸ್ತಿಕಟ್ಟೆಗೊ ನಗರಕ್ಕೋ ಬಂದು ಚಾರ್ಜ್ ಆಗುವವರೆಗೆ ಕಾದು ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲವೆಂದರೆ ಅನಿವಾರ್ಯ ಸಂದರ್ಭದಲ್ಲಿ ಸಂಪರ್ಕ ಸಾಧಿಸುವುದು ಕೂಡ ಕಷ್ಟ ಸಾಧ್ಯ.
1976 ರಿಂದ ಬೇಡಿಕೆ: ನಮಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಮೂರೂವರೆ ದಶಕದಿಂದ ಬೇಡಿಕೆ ಸಲ್ಲಿಸುತ್ತಲೆ ಬಂದಿದ್ದಾರೆ. ಆದರೆ, ಈವರೆಗೆ ಇವರ ಮೊರೆ ಯಾರಿಗೂ ಕೇಳಿಸಿಲ್ಲ. ರಾಜೀವಗಾಂಧಿ ವಿದ್ಯುದೀಕರಣ ಯೋಜನೆಯಡಿಯಲ್ಲೂ ಕೂಡ ಈ ಗ್ರಾಮ ಕೈಬಿಟ್ಟಿದ್ದು ವಿದ್ಯುತ್ ಸೌಲಭ್ಯ ಇವರ ಪಾಲಿಗೆ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ನಕ್ಸಲ್ ಪ್ಯಾಕೇಜ್ನಲ್ಲೂ ಕೂಡ ವಿದ್ಯುತ್ ಸೌಲಭ್ಯ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಾಗಾದರೆ ನಕ್ಸಲ್ ಪ್ಯಾಕೇಜ್ನ ಔಚಿತ್ಯ ಏನು ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.
ಇತ್ತೀಚೆಗೆ ಬಿಡುಗಡೆಯಾದ ನಕ್ಸಲ್ ಪ್ಯಾಕೇಜ್ನಲ್ಲಿ ನಗರ ಹೋಬಳಿಯ ವಿವಿಧ ಪ್ರದೇಶದಲ್ಲಿ 15 ಕಾಮಗಾರಿಗಳ 95.98 ಲಕ್ಷದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದರೂ ಹುಡೋಡಿಯ ವಿದ್ಯುತ್ ಸಂಪರ್ಕ ಕಾಮಗಾರಿ ಸೇರಿಸಿಲ್ಲ. ಹೀಗಾದರೆ ವಿದ್ಯುತ್ ಸೌಲಭ್ಯಕ್ಕಾಗಿ ಇನ್ನೆಷ್ಟು ದಿನ ಪರದಾಡಬೇಕು. ವಿದ್ಯುತ್ ಸಮಸ್ಯೆ ಹೀಗಾದರೆ, ಇನ್ನು ಬಗರ್ಹುಕುಂ, ಸಂಪರ್ಕ, ಹೀಗೆ ಮೂಲಭೂತ ಸೌಕರ್ಯದ ಸಮಸ್ಯೆಗಳಿಂದ ಬೆಂದು ಹೋಗಿರುವ ಕುಟುಂಬಗಳ ಹಿತರಕ್ಷಣೆಗೆ ತುರ್ತಾಗಿ ಸರ್ಕಾರ ಸ್ಪಂದಿಸಬೇಕಿದೆ.
ಸಾಕಷ್ಟು ವರ್ಷಗಳಿಂದ ವಿದ್ಯುತ್ ಸೌಲಭ್ಯಕ್ಕಾಗಿ ಬೇಡಿಕೆ ಇದ್ದರು ನಮ್ಮ ಕಡೆ ಯಾರು ಗಮನ ಹರಿಸುತ್ತಿಲ್ಲ. ಇನ್ನು ಆಶ್ರಯ ಮನೆಗಾಗಿ ಖಾತೆ ಜಾಗ ತೋರಿಸಿ ಗ್ರಾಪಂಗೆ ಬೇಡಿಕೆ ಇಟ್ಟರು ಕೂಡ ಕೊಡೋಕೆ ಬರೋದಿಲ್ಲ ಅಂತಾರೆ. ಹೀಗಾದರೆ ನಮ್ಮ ಸಮಸ್ಯೆ ಯಾರಲ್ಲಿ ಹೇಳೋದು ಅಂತಾನೆ ಗೊತ್ತಾಗಲ್ಲ.
- ಶ್ರೀನಿವಾಸ ನಾಯ್ಕ್, ಗ್ರಾಮಸ್ಥ
ಅದೆಷ್ಟೋ ಸರ್ಕಾರ ಬಂದರೂ ನಮ್ಮ ಬೇಡಿಕೆ ಈಡೇರಿಲ್ಲ. ಕೊಟ್ಟ ಮನವಿಗೆ ಲೆಕ್ಕವಿಲ್ಲ. ಈಗಿನ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಇತ್ತ ಗಮನಹರಿಸಿ ನಮ್ಮ ವಿದ್ಯುತ್ ಬವಣೆ ನೀಗಿಸಿಸಲಿ.
-ಪ್ರಭಾಕರ್, ಗ್ರಾಮಸ್ಥ
-ರವಿ ಬಿದನೂರು