ಕಳ್ಳರ ಬಂಧನ: 9 ಕಾರು ವಶ
ಶಿವಮೊಗ್ಗ: ಬಾಡಿಗೆಗೆಂದು ಕಾರು ಪಡೆದು ನಂತರ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಕಾರು ಮಾಲಿಕರನ್ನು ವಂಚಿಸುತ್ತಿದ್ದ ಅಂತರಾಜ್ಯ ಕಾರು ಕಳ್ಳರ ಜಾಲವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬೇಧಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ಸೂರಿಬೈಲಿನ ವಾಸಿ ಯೂಸೂಫ್ ಹೈದರ್ (27) ಮತ್ತು ಮಂಗಳೂರಿನ ಕಣ್ಣೂರು ಸಮೀಪದ ಬೋರುಗುಡ್ಡೆ ಗ್ರಾಮದ ಮೊಹ್ಮದ್ ಇಜಾಜ್ ಬಂಧಿತರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಮರ್ ಫಾರೂಕ್ ಮತ್ತು ಮಹ್ಮದ್ ಹನೀಫ್ ತಲೆ ಮರೆಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಬ್ಬರೂ ಶಿವಮೊಗ್ಗ, ಬೆಂಗಳೂರು, ಮಂಗಳೂರು, ಕೋಲಾರ ಮೊದಲಾದೆಡೆ ಬಾಡಿಗೆಗೆಂದು ಕಾರು ಪಡೆದು ನಂತರ ಬೇರೆಯವರಿಗೆ ಮಾರಾಟ ಮಾಡಿದ್ದ 9 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಒಟ್ಟಾರೆ ಮೌಲ್ಯ 50ಲಕ್ಷಕ್ಕಿಂತ ಹೆಚ್ಚು.
ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತವರ ಸಿಬ್ಬಂದಿ ಎಎಸ್ಐ ನರಸಿಂಹಯ್ಯ, ನರಸಿಂಹಮೂರ್ತಿ, ಶಂಕರಮೂರ್ತಿ, ಗೋಪಾಲ, ರಮೇಶ್, ಸನಾವುಲ್ಲಾ, ಅಶೋಕ, ಸುರೇಶ್, ಪಾಲಾಕ್ಷ ನಾಯಕ್, ಹಾಲಪ್ಪ ಶ್ರೀನಿವಾಸ ಅವರು ಆರೋಪಿಗಳನ್ನು ಬಂಧಿಸುವ ತಂಡದಲ್ಲಿದ್ದರು.
ಕಾರ್ಯಾಚರಣೆ: ಕಾರು ಕಳ್ಳತನ ಕುರಿತು ಇತ್ತೀಚೆಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರು ವಂಚಕರ ಪತ್ತೆಗೆ ಕುಮಾರಸ್ವಾಮಿ ನೇತೃತ್ವದ ವಿಶೇಷ ತಂಡ ರಚಿಸಿದ್ದರು.
ಈ ತಂಡವು ನಗರದ ಹರಿಗೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯೂಸೂಫ್ ಹೈದರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಂಚನಾಪ್ರಕರಣ ಬಯಲಿಗೆ ಬಂದಿದೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಎಜಾಜ್ನನ್ನು ಬಂಧಿಸಲಾಯಿತು. ನಂತರ ಕಳ್ಳತನ ಮಾಡಲಾಗಿದ್ದ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.