ಕಾರಣ ಹೇಳಬೇಡಿ, ವಿದ್ಯುತ್ ನೀಡಿ
ಶಿರಾಳಕೊಪ್ಪ: ರೈತರ ಕೃಷಿ ಕಾರ್ಯಕ್ಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ಕೊಡುವ ಬಗ್ಗೆ ಯಾವುದೇ ಕಾರಣ ಹೇಳಬೇಡಿ. ನಮಗೆ ವಿದ್ಯುತ್ ಬೇಕು, ಸಮರ್ಪಕ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯ ಬೇಕಾಗುತ್ತದೆ ಎಂದು ರೈತ ಸಂಘಟನೆಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಿರಾಳಕೊಪ್ಪ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ತ ಬಗ್ಗೆ ವಿಚಾರ ವಿನಮಯ ಮಾಡಬೇಕು ಎಂದು ರೈತರ ಕರೆಗೆ ಆಗಮಿಸಿದ್ದ ಎಕ್ಸೂಕ್ಯುಟೀವ್ ಎಂಜನೀಯರ್ ಇಂಧುಶೇಖರಯ್ಯ ಹಾಗು ಎಇಇ ಕೇಶವ, ಇತರ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಾಗ ಅಧಿಕಾರಿಗಳ ಮಾತನ್ನು ಶಾಂತವಾಗಿ ಆಲಿಸಿದ ರೈತರು, ನಮಗೆ ನಿಮ್ಮ ಕಾರಣ ಬೇಡ. ನಮಗೆ ನೀವು ಈಗಾಗಲೇ ಸರಬುರಾಜು ಮಾಡುತ್ತಿರುವ ವಿದ್ಯುತ್ ಬಿಟ್ಟು ಕೇವಲ ಒಂದು ಗಂಟೆ ಹೆಚ್ಚುವರಿ ವಿದ್ಯುತ್ ಅನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು ಕುಡಿಯುವ ನೀರಿನ ಬಗ್ಗೆ ಕೇಳುತ್ತಿದ್ದೇವೆ ಎಂದು ಪಟ್ಟ ಹಿಡಿದಾಗ ಅಧಿಕಾರಿಗಳು ನಾಲ್ಕು ದಿನ ಅವಕಾಶ ಕೇಳಿ ದಿ.22ರಿಂದ ವಿದ್ಯುತ್ತ ಸರಬರಾಜು ಮಾಡುವುದಾಗಿ ತಿಳಿಸಿದರು.
ಮೆಸ್ಕಾಂ ವಿನಂತಿ: ನಮಗೆ ನಿಗದಿ ಪಡಿಸುತ್ತಿರುವ ವಿದ್ಯುತ್ ಸರಬರಾಜಿನಲ್ಲಿ ನಾವು ಎಲ್ಲ ಫೀಡರ್ಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು, ಹೆಚ್ಚುವರಿ ವಿದ್ಯುತ್ ಬೇಕು ಎಂದರೆ ಎಲ್ಲಿಂದ ತರಬೇಕು ಎಂದು ಇಂಧುಶೇಖರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ಬೇಕು ಎನ್ನುವ ನೀವು ಸಂಜೆ ವೇಳೆಯಲ್ಲಿ ಎಲ್ಲ ರೈತರು ಕಂಡೆನ್ಸರ್ ಹಾಕುತ್ತೀರಿ, ಮೊದಲು ಅದನ್ನು ಬಂದ್ ಮಾಡಬೇಕು ಎಂದರು.
ಇದನ್ನು ಒಪ್ಪದ ರೈತರು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕಾರಣ ಹೇಳಬೇಡಿ ಎಂದರು.
ಹಣ ನೀಡಿಲ್ಲ: ಮೆಸ್ಕಾಂ ಇಲಾಖೆ ಶಿಕಾರಿಪುರ ತಾಲ್ಲೂಕ ಒಂದರಲ್ಲಿ ಎಲ್ಲಿಯೂ ಅಳವಡಿಸದಷ್ಟು ಎಂದರೆ 98 ಟ್ರಾನ್ಸ್ಪಾರ್ಮರ್ ಹಾಕಿದ್ದೇವೆ. ಈ ವರೆಗೆ ಸರ್ಕಾರದಿಂದ ಒಂದು ಪೈಸೆಯೂ ಬಿಡುಗಡೆಆಗಿಲ್ಲ. ಹಾಗೆಯೇ ಡಿಪಾಜಿಟ್ ಸಹ ಕಟ್ಟಿಲ್ಲ. ಆದರೆ ನಾವು ಯಾವುದೇ ಕೆಲಸಕಾರ್ಯವನ್ನು ನಿಲ್ಲಿಸಿಲ್ಲ ಎಂದರು.
ಸಲಹಾ ಸಮಿತಿ ರಚನೆ: ವಿದ್ಯುತ್ತ್ಸ್ಲಹಾ ಸಮಿತಿಯನ್ನು ರಚಿಸಬೇಕು ಎಂಬ ಆದೇಶದಂತೆ ಪ್ರತಿ ತಾಲ್ಲೂಕಿನಲ್ಲಿ ಸಲಹಾ ಸಮಿತಿ ರಚಿಸ ಲಾಗುವುದು. ಸಲಹಾಸಮಿತಿಯಲ್ಲಿ ತಾಲ್ಲೂಕಿನ ತಹಶೀಲ್ದಾರ್, ಡಿಎಸ್ಪಿ, ಕೈಗಾರಿಕಾ ವ್ಯಕ್ತಿಗಳು,ರೈತನಾಯಕರು ಇರುವಂತಹ ಸಮಿತಿಯನ್ನು ರಚಿಸಲಾಗುವದು, ಆ ಸಲಹಾ ಸಮಿತಿಯಲ್ಲಿ ತೆಗೆದು ಕೊಳ್ಳುವ ತೀರ್ಮಾನವನ್ನು ಮೇಲಾಧಿಕಾರಿಗಳಿಗೆ ಕಳಿಸುತ್ತೇವೆ ಎಂದರು.
ಸಭೆಯಲ್ಲಿ ಉಡಗಣಿ-ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಅಧ್ಯಕ್ಷ ಮುಗಳಿಕೊಪ್ಪದ ರಾಜಣ್ಣ, ರೈತ ಮುಖಂಡ ವೀರಣ್ಣ, ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಯೋಗಿ, ಉಡಗಣಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ, ಹಾಗು ಹಲವಾರು ಪ್ರಮುಖರು ಸಭೆಯಲ್ಲಿ ಹಾಜರಿದ್ದರು.