ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚಿಕ್ಕ ಹಿಡುವಳಿದಾರರ ಹಿತ ಕಾಯಲು ಬದ್ಧ

Vishwanath S
Updated On : 19 Feb 2014, 11:20 am

ಶಿವಮೊಗ್ಗ:  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಪಕ್ಷಕ್ಕೆ 10-12 ಸ್ಥಾನಗಳು ಬಂದರೆ ಅರಣ್ಯ ಕಾಯ್ದೆಯಲ್ಲಿ ವಾಸ್ತವಕ್ಕೆ ಹತ್ತಿರವಾದ ಅಗತ್ಯ ಬದಲಾವಣೆ ತರಲು ಸಂಸತ್ತಿನಲ್ಲಿ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ಅರಣ್ಯದಲ್ಲಿ ಚಿಕ್ಕ ಹಿಡುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಹಿತ ಕಾಪಾಡಲು ಪಕ್ಷ ಬದ್ಧವಾಗಿದೆ ಎಂದಿದ್ದಾರೆ.
 ನ್ಯಾಯಾಧೀಶರು ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಲ್ಲಿ ತಾವೇ ಖುದ್ದಾಗಿ ಸ್ಥಳ ಪರಿಶೀಲಿಸಿ, ವಾಸ್ತವಾಂಶ ಅರಿಯಬೇಕು. ಕೇವಲ ದಾಖಲೆ ನೋಡಿ ತೀರ್ಪು ನೀಡಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಟೀಕೆ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಅವರು, ವಿಧಾನಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡುವ ಈ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುತ್ತಿದೆ ಎಂದು ಟೀಕಿಸಿದರು.
 ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯದ 17 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸಂಸತ್ತಿನಲ್ಲಿ ಕಾಯಿದೆ ರೂಪಿಸಲಾಗಿತ್ತು. ಆದರೆ ಈವರೆಗೆ ಕೇವಲ 5 ಸಾವಿರ ಹೆಕ್ಟೇರ್ ಪ್ರದೇಶವನ್ನು ಮಾತ್ರ ವರ್ಗಾಯಿಸಲಾಗಿದೆ. ಇನ್ನುಳಿದ 12 ಸಾವಿರ ಹೆಕ್ಟೇರ್ ಪ್ರದೇಶವನ್ನು ವರ್ಗಾಯಿಸಲು ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಗೆ ತರಾಟೆ: ಬಿಜೆಪಿ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಪೋಸ್ಟರ್ ಗಳಲ್ಲಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರನ್ನು ಆಲಂಗಿಸಿಕೊಂಡು -ಎಲ್ಲರೊಳಗೊಂದಾಗುವ- ಎಂದು ಘೋಷಣೆ ಹಾಕಿದ್ದಾರೆ. ಅಂದರೆ ನರೇಂದ್ರ ಮೋದಿ -ಭ್ರಷ್ಟಾಚಾರದೊಳಗೊಂದಾಗಿದ್ದಾರೆಯೇ- ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವನ್ನೂ ಟೀಕಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಜೆಟ್ ಮಂಡಿಸಿದ್ದಾರೆ. ಇದೊಂದು ದೊಡ್ಡ ಜೋಕ್ ಎಂದು ಟೀಕಿಸಿದರು.
 ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಹಾನಗರ ಪಾಲಿಕೆ ಉಪ ಮೇಯರ್ ರೇಖಾ ಚಂದ್ರಶೇಖರ್, ತಾ.ಪಂ. ಉಪಾಧ್ಯಕ್ಷೆ ಅತಿಯಾ ಬೇಗಂ, ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಮುಖಂಡರಾದ ಜಿ.ಡಿ. ಮಂಜುನಾಥ್, ನಾಗರಾಜ ಕಂಕಾರಿ, ಪಾಲಾಕ್ಷಿ, ಏಳುಮಲೈ, ಜಗದೀಶ್, ರಾಮಕೃಷ್ಣ, ಜಿ.ವಿ. ನಾಗರಾಜ್, ನಾಕುಂಜಿ ಸುಧಾಕರ್, ಎಚ್.ಎಂ. ಮಹೇಶ್ವರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
'ರಾ. ಪಕ್ಷಗಳಲ್ಲಿ ಸ್ಪಷ್ಟ ನೀತಿಗಳಿಲ್ಲ'
ಶಿಕಾರಿಪುರ: ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಈ ಸಂದರ್ಭದಲ್ಲಿ ಕೇವಲ ಭ್ರಷ್ಟಾಚಾರದ ಪ್ರತ್ಯಾರೋಪದಲ್ಲಿ ಮುಳುಗಿದ್ದು ಸಾಮಾನ್ಯ ಜನತೆಗೆ ಅನಿವಾರ್ಯವಾದ ಯೋಜನೆ, ಕಾರ್ಯಕ್ರಮದ ಬಗ್ಗೆ ಸ್ಪಷ್ಟ ನೀತಿ ಇಲ್ಲದೆ ಸ್ವಾರ್ಥ ಸಾಧನೆಯಲ್ಲಿ ಪೈಪೋಟಿಗಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಶಾಸಕ ಕುಮಾರಸ್ವಾಮಿ ಆರೋಪಿದರು.
  ಮಂಗಳವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ತಾ.ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ನಂತರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಪರ ಸಾಮಾಜಿಕ ಕಳಕಳಿ ಹೊಂದಿದ್ದ ದಿ.ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ದೊರಕಲು ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿದರು.
 ರಾಜ್ಯದಲ್ಲಿ ಅಧಿಕಾರಕ್ಕೆರಿದ ಕಾಂಗ್ರೆಸ್ ಆರಂಭದಲ್ಲಿ ನೀರಾವರಿಗೆ 50 ಸಾವಿರ ಕೋಟಿ ಮೀಸಲಿರಿಸುವುದಾಗಿ ತಿಳಿಸಿ ಬಜೆಟ್‌ನಲ್ಲಿ 9 ಸಾವಿರ ಕೋಟಿ ನಿಗದಿಗೊಳಿಸಿದೆ. ರೈತರಿಗೆ ಸತತ 12 ಗಂಟೆ ವಿದ್ಯುತತ್ನೀಡುವುದಾಗಿ ಇದೀಗ ಮದ್ಯರಾತ್ರಿ 2-3 ಗಂಟೆ ಮಾತ್ರ ನೀಡುತ್ತಿದ್ದು ನೀರು ಹಾಯಿಸಲು ತೆರಳಿದ ರೈತರು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
 ಮುಖಂಡ ಶ್ರೀಕಾಂತ್, ಎಚ್.ಟಿ ಬಳಿಗಾರ್, ನಾಗನಗೌಡ ಪಾಟೀಲ್, ಜಯಾನಾಯ್ಕ, ಮಲ್ಲೇಶಪ್ಪ, ಬಿಳಕಿ ನಾಗರಾಜಗೌಡ,ಪ.ಪಂ ಸದಸ್ಯೆ ರಶೀದಾ ಭಾನು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement