ಮಾರಿಕಾಂಬಾ ಜಾತ್ರೆಗೆ ಅಧಿಕೃತ ಚಾಲನೆ
ಸಾಗರ: ಮಾರಿಕಾಂಬಾ ದೇವಿಯ ಭವ್ಯ ಮೂರ್ತಿಯನ್ನು ತವರು ಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಮೂಲಕ ಇಲ್ಲಿನ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರೆಯಿತು.
ಮಂಗಳವಾರ ಬೆಳಗ್ಗೆ 4 ಗಂಟೆಗೆ ಮಾರಿಕಾಂಬಾ ಉತ್ಸವ ಮೂರ್ತಿಗೆ ದೇವಿ ಗುಡಿಗಾರ್ ದೃಷ್ಟಿ ಇಡುವ ಕಾರ್ಯಕ್ರಮ ನಡೆಯಿತು.
ನಂತರ ಶ್ರೀದೇವಿಗೆ ತೊಡಿಸುವ ಮಾಂಗಲ್ಯದ ಮೆರವಣಿಗೆ ನಡೆಯಿತು. ಮೆರವಣಿಗೆ ಮೂಲಕ ಮಾಂಗಲ್ಯವನ್ನು ಮಹಾಗಣಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಪುನಃ ಮಾರಿಕಾಂಬಾ ದೇವಸ್ಥಾನದ ತವರು ಮನೆಗೆ ತರಲಾಯಿತು.
ಧಾರ್ಮಿಕ ವಿಧಿ ವಿಧಾನ: ನಂತರ ಗುಡಿಗಾರ ಸಮಾಜದವರಿಂದ ಬಾಸಿಂಗ ಧಾರಣೆ, ಬ್ರಾಹ್ಮಣ ಸಮಾಜದ ರಮೇಶ್ ಭಟ್ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನ ಹಾಗೂ ಬೆಳಗ್ಗೆ 5ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಿತು.
ಕಂಚಿಗ ಸಮಾಜದವರಿಂದ ದೇವಿಗೆ ಉಡಿ ತುಂಬವ ಕಾರ್ಯಕ್ರಮದ ನಂತರ ವಿಶ್ವಕರ್ಮ ಜನಾಂಗದವರಿಂದ ಶ್ರೀದೇವಿಗೆ ಪ್ರಥಮ ಪೂಜೆ ನೆರವೇರಿತು. 5-30ಕ್ಕೆ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ನಡೆಯಿತು. ನಂತರ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ಕಾಗೋಡು ಅಣ್ಣಪ್ಪ, ಅಧ್ಯಕ್ಷ ಕೆ.ಎನ್. ನಾಗೇಂದ್ರ, ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸಹ ಕಾರ್ಯದರ್ಶಿ ಎಸ್.ವಿ. ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟಾ, ವಿವಿಧ ಸಮಿತಿ ಸಂಚಾಲಕ ಸಂತೋಷ್ ಶೇಟ್, ಪುರುಷೋತ್ತಮ, ಬಾಲಕೃಷ್ಣ, ಗುಳೇದ್, ಭಾಸ್ಕರ್, ಜೆ. ನಾಯಕ್, ಲೋಕೇಶ ಕುಮಾರ್, ರವಿ ನಾಯ್ಡು, ತಾರಾಮೂರ್ತಿ, ರಾಮಚಂದ್ರ, ಸುಂದರಸಿಂಗ್ ಹಾಜರಿದ್ದರು.
ದೇವಿಯ ದರ್ಶನಕ್ಕಾಗಿ ಮಧ್ಯರಾತ್ರಿ 1ರಿಂದಲೇ ಭಕ್ತರು ಸರದಿ ಸಾಲಿನಲ್ಲಿ ಕಾದು ನಿಂತಿದ್ದರು. ಮಾರಿಕಾಂಬಾ ದೇವಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದವರೆಗೂ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು, ಉಡಿತುಂಬಿ ಕೃತಾರ್ಥರಾದರು. ಸಂಜೆಯವರೆಗೂ ಭಕ್ತರ ಸಾಲು ಕಡಿಮೆಯಾಗಿರಲಿಲ್ಲ.
ಭಕ್ತರಿಗೆ ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಪಾನಕದ ವ್ಯವಸ್ಥೆಯನ್ನು ಮಾಡಲಾಗಿತ್ತು. ಋಷಿ ಸಂಸ್ಕೃತಿ ವಿದ್ಯಾಕೇಂದ್ರದಿಂದ ಭಕ್ತಾದಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗಿತ್ತು. ಮಲೆನಾಡು ಮುದ್ರಕರ ಸಂಘದಿಂದ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.