26ಕ್ಕೆ ನಗರದಲ್ಲಿ 'ಭಾರತ ಗೆಲ್ಲಿಸಿ' ರ್ಯಾಲಿ
ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ನಗರದಲ್ಲಿ ಫೆ.26ರಂದು ಆಯೋಜಿಸಿರುವ “ಭಾರತ ಗೆಲ್ಲಿಸಿ’ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದು, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಕಾರ್ಯಕ್ರಮದ ಸಿದ್ಧತೆಗಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ತಂಡಗಳನ್ನು ರಚಿಸಲಾಗಿದೆ. ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮವು ಬಸ್ ಡಿಪೋ ಪಕ್ಕದಲ್ಲಿರುವ ನಗರಸಭೆ ಮೈದಾನದಲ್ಲಿ ನಡೆಯಲಿದೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು 20 ತಂಡಗಳನ್ನು ರಚಿಸಲಾಗಿದೆ ಎಂದರು.
ಜಿಲ್ಲೆಯ 260 ಗ್ರಾಮ ಪಂಚಾಯ್ತಿ ಹಾಗೂ 188 ವಾರ್ಡ್‌ಗಳಲ್ಲಿ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕ್ಷೇತ್ರ ಮುಖಂಡರು ಬುಧವಾರದಿಂದ ಮೂರು ದಿನ ಸಭೆ ನಡೆಸಲಿದ್ದು, ಈಗಾಗಲೇ ಕಾರ್ಯಕ್ರಮ ನಿಗದಿಯಾಗಿದೆ. ಪ್ರಮುಖರ ಸಭೆ ನಡೆಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು.
ಫೆ.22ರಂದು ಜಿಲ್ಲೆಯ ಎಲ್ಲಾ ಪ್ರಮುಖ ನಗರಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. 23ರಂದು ಮಹಾಸಂಪರ್ಕ ಅಭಿಯಾನ ಆಯೋಜಿಸಲಾಗಿದ್ದು, ಕ್ಷೇತ್ರದ ಎಲ್ಲಾ ಮನೆಮನೆ ಭೇಟಿ ಕಾರ್ಯಕ್ರಮವಿದೆ ಎಂದರು.
ಮುಖಂಡ ಪುರುಷೋತ್ತಮ್, ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಫೆ.23ರಂದು ತುಮಕೂರಿನಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಭಾಗವಹಿಸಲಿದ್ದು, ಜಿಲ್ಲೆಯಿಂದ 3 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ಎಂ. ಶಂಕರ್, ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಶಿವರಾಜ್, ಸಾಲೇಕೊಪ್ಪ ರಾಮಚಂದ್ರ, ಎಚ್.ಸಿ. ಬಸವರಾಜಪ್ಪ, ಜಯರಾಮ್, ಶಿವರಾಜ್, ಬ.ರಾ. ಮಧುಸೂದನ್, ಅಣ್ಣಪ್ಪ ಇದ್ದರು.
ನಮ್ಮಲ್ಲೂ ದಾಖಲೆಗಳಿವೆ
ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತವು ತನಿಖೆ ನಡೆಸಲು ಮುಂದಾಗಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಸೂಡಾ ಮಾಜಿ ಅಧ್ಯಕ್ಷರೂ ಆಗಿರುವ ಎಸ್. ದತ್ತಾತ್ರಿ ಹೇಳಿದ್ದಾರೆ. ಚುನಾವಣೆ ಹತ್ತಿರದಲ್ಲಿರುವುದರಿಂದ ರಾಜಕೀಯ ಕಾರಣದಿಂದ ಆರೋಪ ಮಾಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ಯಾವ ತಪ್ಪೂ ಆಗಿಲ್ಲ. ಈ ಬಗ್ಗೆ ನಾವೂ ದಾಖಲೆ ಹೊಂದಿದ್ದೇವೆ. ನಿವೇಶನ ಹಂಚುವುದಕ್ಕೆ ಅಧ್ಯಕ್ಷರ ವಿವೇಚನ ಕೋಟಾ ಇದೆಯೋ, ಇಲ್ಲವೋ ಎಂಬುದಕ್ಕೆ ನಮ್ಮ ಬಳಿ ದಾಖಲೆ ಇವೆ ಎಂದು ಅವರು ಹೇಳಿದರು.