ಜ್ಞಾನದೀಪ ಶಾಲೆಗೆ ತೃತೀಯ ಬಹುಮಾನ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.19
ಬೆಂಗಳೂರಿನ ವಂಡರ್ ಲಾ ಫ್ಯಾಂಟಸಿ ಪಾರ್ಕ್ ಆಯೋಜಿಸಿದ್ದ ರಾಜ್ಯಮಟ್ಟದ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಇಂಧನ ಸದ್ಬಳಕೆ ವಿಷಯವಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲೆಗೆ ತೃತೀಯ ಸ್ಥಾನ ಲಭಿಸಿದೆ.
ಕರ್ನಾಟಕದಾದ್ಯಂತ ಸುಮಾರು 700 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಂತಿಮ ಸುತ್ತಿಗೆ 150 ಶಾಲೆಗಳು ಆಯ್ಕೆಯಾಗಿದ್ದವು. ಈ ಸ್ಪರ್ಧೆಯಲ್ಲಿ ಶಾಲೆಯ ಪರಿಸರ, ಸ್ವಚ್ಛತೆ, ಹಸಿರು ಗಿಡ-ಮರಗಳನ್ನು ಬೆಳೆಸಿರುವುದು, ಮಳೆ ನೀರಿನ ಸಂರಕ್ಷಣೆ, ಸೌರಶಕ್ತಿಯ ಸದ್ಬಳಕೆ ಹೀಗೆ ಹಲವಾರು ವಿಷಯಗಳನ್ನು ಗಮನದಲ್ಲಿರಿಸಿಕೊಂಡು ತೀರ್ಪು ನೀಡಲಾಗಿದೆ. ವಂಡರ್ ಲಾ ದಿಂದ ನಿಯೋಜನೆಗೊಂಡ ಕೆಲವು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎಲ್ಲಾ ರೀತಿಯ ಅಂಶಗಳನ್ನು ಗಮನಿಸಿ ತೀರ್ಪನ್ನು ನೀಡಿರುತ್ತಾರೆ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪರಿಸರ ಬರಹಗಾರ ನಾಗೇಶ್ ಹೆಗಡೆ, ವಂಡರ್ ಲಾ ಮುಖ್ಯ ವ್ಯವಸ್ಥಾಪಕ ಅರುಣ ಕೆ.ಸಿ., ಪರಿಸರ ಸಂರಕ್ಷಣಾಧಿಕಾರಿ ಸಾದಿಕ್ ಅಹಮದ್ ಉಪಸ್ಥಿತರಿದ್ದು ಬಹುಮಾನ ನೀಡಿದರು.ತೃತೀಯ ಬಹುಮಾನವು ಆಕರ್ಷಕ ಪಾರಿತೋಷಕದೊಂದಿಗೆ 15,000 ನಗದು ಬಹುಮಾನ ಒಳಗೊಂಡಿದೆ. ಶಾಲೆಯ ಪರವಾಗಿ ಶಿಕ್ಷಕರಾದ ಸಿಂಧೂ ಬಾಲಕೃಷ್ಣನ್ ಹಾಗೂ ಗ್ಲ್ಯಾನ್ಸಿ ಡಿಸೋಜ ಬಹುಮಾನ ಸ್ವೀಕರಿಸಿದರು.