ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹಕ್ಕುಪತ್ರ ವಿತರಣೆಯಲ್ಲಿ ಲೋಪವಾಗದಿರಲಿ'

Vishwanath S
Updated On : 20 Feb 2014, 11:37 am

ಸಾಗರ: ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಅಧಿನಿಯಮ 2012ರ ತಿದ್ದುಪಡಿಗಳ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಡಾ. ಉದಯಕುಮಾರ ಶೆಟ್ಟಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು.
ಅರಣ್ಯ ಹಕ್ಕು ಕಾಯ್ದೆಗೆ ತಂದಿರುವ ತಿದ್ದುಪಡಿಗಳ ಹಿನ್ನೆಲೆಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಜನರಿಗೆ ಭೂಮಿಯ ಹಕ್ಕುಪತ್ರ ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ದೋಷಗಳನ್ನು ಮಾಡಬಾರದು. ಅರ್ಜಿಯ ಮಂಜೂರಾತಿ ಪ್ರಕ್ರಿಯೆಯಲ್ಲಿ ಕಾಯ್ದೆಯ ನಿರ್ದೇಶನಗಳು ಉಲ್ಲಂಘನೆಯಾಗದಂತೆ, ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಅರ್ಜಿ, ದಾಖಲೆಗಳ ಸಲ್ಲಿಕೆ ಅರ್ಜಿದಾರನ ಜವಾಬ್ದಾರಿ. ಅದರ ಪರಿಶೀಲನೆ ಅರಣ್ಯ ಹಕ್ಕು ಸಮಿತಿಯ ಅಧಿಕಾರವಾಗಿದ್ದು ಒಂದೊಮ್ಮೆ ಶಿಫಾರಸು ಮಾಡುವಲ್ಲಿ ಗ್ರಾಮದ ಅರಣ್ಯ ಹಕ್ಕು ಸಮಿತಿಗಳು ತಪ್ಪು ಮಾಡಿದರೆ ಅವರೂ ಭಾರತದ ದಂಡಸಂಹಿತೆ ಪ್ರಕಾರ ಶಿಕ್ಷೆಗೊಳಗಾಗಬಹುದು ಎಂಬುದನ್ನು ಅವರಿಗೆ ತರಬೇತಿ ಕೊಡುವಾಗ ಎಚ್ಚರಿಸಬೇಕು ಎಂದು ಅಧಿಕಾರಿಗಳಿಗೆ ಎಸಿ ಸೂಚನೆ ನೀಡಿದರು.
ಅರಣ್ಯ ಇಲಾಖೆಯ ಜಿಪಿಎಸ್ ತಂತ್ರಜ್ಞಾನದಿಂದ ಸ್ಥಳ ಗುರುತಿಸಬೇಕು. ಕಳೆದ ಬಾರಿಯಂತೆ ಅರ್ಜಿದಾರನಿಗೆ ಅರ್ಜಿಯ ಫಲಿತಾಂಶ ತಿಳಿಸದಿರುವ ಪ್ರಮಾದ ಈ ಬಾರಿ ಆಗಬಾರದು. ಅಂಗನವಾಡಿ, ಶಾಲೆ, ಕಾಲುದಾರಿ, ಸ್ಮಶಾನ, ದೇವಸ್ಥಾನಗಳ ಹಕ್ಕುಪತ್ರ ವಿಚಾರದಲ್ಲಿ ವೈಯುಕ್ತಿಕ ಅರ್ಜಿಯ ಸ್ಥಳ ವಿಚಾರಣೆಯನ್ನು ಹೊರತುಪಡಿಸಿ ಪ್ರತ್ಯೇಕವಾಗಿಯೇ ಪರಿಶೀಲನೆ ನಡೆಸಬೇಕು. ಪ್ರಸ್ತುತ ಈ ಸಮಿತಿಗೆ ಸಂಬಂಧಿಸಿದ ಯಾರಲ್ಲೂ ಖಚಿತ ಮಾಹಿತಿಗಳಿಲ್ಲ. ಈ ಹಿನ್ನೆಲೆಯಲ್ಲಿ ಸಾಗರ, ಹೊಸನಗರ ವ್ಯಾಪ್ತಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾಯ್ದೆಯ ಬಗ್ಗೆ ಯಾಂತ್ರಿಕವಾಗಿರದೆ, ಜನರಿಗೆ ಅನುಕೂಲ ಕೊಡಲು ಸಿಕ್ಕ ಸದವಕಾಶ ಎಂದುಕೊಳ್ಳಬೇಕು. ಅರಣ್ಯ ಹಕ್ಕು ಸಮಿತಿ ಕೇವಲ ಜನರಿಗೆ ಹಕ್ಕುಪತ್ರ ಕೊಡಿಸುವುದಲ್ಲದೆ ಅರಣ್ಯ ಸಂರಕ್ಷಣಾ ಸಮಿತಿ ರಚಿಸಿ ಜನ ಮಂಜೂರಾದ ಸ್ಥಳಕ್ಕಿಂತ ಹೆಚ್ಚಿನದನ್ನು ಬಳಸದಂತೆ, ಅರಣ್ಯ ಇಲ್ಲದಿದ್ದ ಭಾಗದಲ್ಲಿ ಹಸಿರು ಮೂಡಿಸುವ ಕೆಲಸ ಮಾಡುವ ಆಶಯವನ್ನು ಕಾಯ್ದೆ ಹೊಂದಿದೆ ಎಂದರು.
ತಾಲೂಕು ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿ ಶ್ರೀಧರ್ ಮಾತನಾಡಿದರು.
ಪ್ರೊಬೆಷನರಿ ಉಪವಿಭಾಗಾಧಿಕಾರಿ ಭಾಗ್ಯಲಕ್ಷ್ಮೀ, ಹೊಸನಗರದ ಸಮಾಜ ಕಲ್ಯಾಣ ಅಧಿಕಾರಿ ಸತೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ. ಸಿದ್ದಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement