ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು: ತರಾಟೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 20
ನಗರದ ಜನತೆಗೆ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿದೆ ಎಂಬ ಅಂಶವನ್ನು ನಾಗರಿಕ ಹಿತರಕ್ಷಣಾ ವೇದಿಕೆ ಹೊರಗೆಡಹಿದೆ. ಹಾಗೆಯೇ, ನೀರಿನ ಶುಲ್ಕ ದುಪ್ಪಟ್ಟು ಮಾಡಿರುವ ಪಾಲಿಕೆ ಆಡಳಿತ ವರ್ಗಕ್ಕೆ ಕನಿಷ್ಠ ಗುಣಮಟ್ಟದ ನೀರಾದರೂ ನೀಡಬೇಕು ಎನ್ನುವ ಪ್ರಯತ್ನ ಮಾಡಿಲ್ಲ ಎಂದು ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಗುರುವಾರ ಇಲ್ಲಿನ ಮಂಡ್ಲಿಯಲ್ಲಿರುವ ಶ್ರೀ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು, ಕೂಡಲೇ ನ್ಯೂನ್ಯತೆ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಏನೆಲ್ಲಾ ನ್ಯೂನ್ಯತೆಗಳಿವೆ? ಶ್ರೀ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಕೇಂದ್ರಕ್ಕೆ ಭೇಟಿ ನೀಡಿದ ಒಕ್ಕೂಟದ ಪ್ರಮುಖರು, ಅಲ್ಲಿನ ನ್ಯೂನ್ಯತೆಗಳನ್ನು ಪಟ್ಟಿಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನೀರು ಶುದ್ಧೀಕರಣ ಕೇಂದ್ರದಲ್ಲಿ ಸಿಲ್ಟ್ ಹೊರದೂಡುವ ಯಂತ್ರ ಕ್ಲಾರಿ ಫ್ಲಾಕೂಲೇದಟರ್ ಸುಮಾರು 6 ತಿಂಗಳಿಂದ ಹಾಳಾಗಿದ್ದು, ರಿಪೇರಿ ಮಾಡಿಲ್ಲ. ನೀರಿನ ಪರಿಶೋಧನೆ ಮಾಡುವ ಲ್ಯಾಬೋರೇಟರಿಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಉಪಕರಣಗಳಿದ್ದರೂ ಅದರ ಉಪಯೋಗವಾಗುತ್ತಿಲ್ಲ.
ಶುದ್ಧೀಕರಣ ಘಟಕದಲ್ಲಿ ಲ್ಯಾಬ್ ಟೆಕ್ನೀಷಿಯನ್ ಯಾರು ಇಲ್ಲವೇ ಇಲ್ಲ. ಕನಿಷ್ಠ ಇಬ್ಬರಾದರೂ ಇರಬೇಕಾಗಿತ್ತು. ಅಲಂ ಸರಿಯಾದ ಪ್ರಮಾಣದಲ್ಲಿ ಸೇರುತ್ತಿಲ್ಲ ಮತ್ತು ಹೊಸ ಘಟಕದಲ್ಲಿ ಅಲಂ ಮಿಶ್ರಣ ಮಾಡುವ ಯಂತ್ರದ ಮೋಟರ್ಸ್ ಹಾಳಾಗಿವೆ.
ಹಾಳಾದ ಕ್ಲೋರಿನ್ ಉಪಕರಣ: ನೀರು ಶುದ್ಧೀಕರಣ ಹಳೇ ಘಟಕದ ಹತ್ತಿರ ಪಂಪಿನಿಂದ ಹಾದು ಬರುವ ಸಮೀಪ ಬೈಪಾಸ್ ಗೇಟ್ವಾಲ್ವ್ ಇದ್ದರೂ ಒಂದೇ ಎಂತಾಗಿದೆ. ಪಂಪಿನಿಂದ ಹರಿದು ಬರುವ ನೀರಿಗೆ ಅಲಂ ಮಿಕ್ಸ್ ಆಗದೆ ಸಿಲ್ಟ್ ಬೇರ್ಪಡಿಸದೇ ನೇರವಾಗಿ ಫಿಲ್ಟರ್ಗಳಿಗೆ ನೀರು ಹರಿದುಬರುತ್ತಿದೆ. ಅಲಂ ಸ್ಟಾಕ್ಗಾಗಲಿ, ಬ್ಲಿಚಿಂಗ್ ಪೌಡರ್ಗಾಗಲಿ ಯಾವುದೇ ಲಾಗ್ ಬುಕ್, ಸ್ಟಾಕ್ ಬುಕ್ಗಳನ್ನು ಇಟ್ಟಿಲ್ಲ.
ನೀರಿಗೆ ಕ್ಲೋರಿನ್ ಮಿಶ್ರಣ ಆಗುತ್ತಿಲ್ಲ. ಕ್ಲೋರಿನ್ ಯಾವ ಪ್ರಮಾಣದಲ್ಲಿ ನೀರಿಗೆ ಸೇರುತ್ತಿದೆ ಎಂದು ತೋರಿಸಬೇಕಾದ ಉಪಕರಣ ಹಾಳಾಗಿ ತಿಂಗಳುಗಳಾಗಿವೆ, ರಿಪೇರಿ ಮಾಡಿಸಿಲ್ಲ. ಕ್ಲೋರಿನ್ ಮಿಶ್ರಣಕ್ಕೆ ಬದಲಿ ವ್ಯವಸ್ಥೆಯ ಉಪಕರಣ ಕೆಲವು ತಿಂಗಳುಗಳಿಂದ ಹಾಳಾಗಿದ್ದರೂ ರಿಪೇರಿ ಮಾಡಿಸಿಲ್ಲ.
ಕ್ಲೋರಿನ್ ಸಿಲಿಂಡರ್ಗಳ ಲಾಗ್ ಪುಸ್ತಕ ಸ್ಟಾಕ್ ಪುಸ್ತಕ ನಿರ್ವಹಿಸುತ್ತಿಲ್ಲ. ಕ್ಲೋರಿನ್ ಮುಖ್ಯ ಸಂಪ್ಗೆ ಹರಿಸುವ ಪೈಪ್ಗಳು ಅವೈಜ್ಞಾನಿಕವಾಗಿದ್ದು ಬಹಳ ಅಪಾಯಕಾರಿ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲಾ ಯಂತ್ರಗಳು ಉಪಕರಣಗಳು ಹಾಳಾಗಿದ್ದೂ ಅಧಿಕಾರಿಗಳು ಗಮನಕ್ಕೆ ತಂದಿರುವ ಒಂದೇ ಒಂದು ದಾಖಲೆ ಲಭ್ಯವಿಲ್ಸ.
ಆಗ್ರಹ: ಕೂಡಲೇ ಗುಣಮಟ್ಟದ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು, ಅವ್ಯವಸ್ಥೆ ತಾಣವಾಗಿರುವ ಶ್ರೀ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಘಟಕವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರಲ್ಲದೇ, ಈ ಬಗ್ಗೆ ಜಿಲ್ಲಾಧಿಕಾರಿ, ನಗರಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.