ಜನಪದ ಸಾಹಿತ್ಯದಲ್ಲಿ ಮೌಲ್ಯಗಳು ಅಡಕ: ಹೆಗಡೆ
ಹೊಸನಗರ: ಮಾನವೀಯ ಮೌಲ್ಯಗಳು ಅಡಕವಾಗಿರುವ ಕಾರಣ ಜನಪದ ಸಾಹಿತ್ಯ ಇಂದಿಗೂ ಜೀವಂತವಾಗಿದೆ ಎಂದು ತಾಲೂಕಿನ ಚಿಕ್ಕಜೇನಿ ಪೌಢಶಾಲೆಯ ಕನ್ನಡ ಅಧ್ಯಾಪಕ ಎನ್.ಡಿ. ಹೆಗಡೆ ತಿಳಿಸಿದರು.
ತಾಲೂಕು ಕಸಾಪ ಘಟಕವು ಇಲ್ಲಿನ ಮುಂಬಾರು ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಶಾಮಣ್ಣ ಉಡುಪ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಜನಪದ ಸಾಹಿತ್ಯ, ಯುವಜನ ಮತ್ತು ಶಿಕ್ಷಣ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಛಂದಸ್ಸು, ಅಲಂಕಾರಗಳನ್ನು ಹೊಂದಿರುವ ಜನಪದ ಸಾಹಿತ್ಯದ ರಚನಕಾರರು ಪ್ರಕೃತಿ ಆರಾಧಕರು. ವಿಶೇಷ ದೃಷ್ಟಿಕೋನ ಹೊಂದಿದವರು ಎಂದ ಅವರು, ಆಧುನಿಕತೆಯ ಭರಾಟೆಯಲ್ಲಿ ಜನಪದ ಸಾಹಿತ್ಯ ಮೂಲೆ ಗುಂಪಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿ-ಆದರ್ಶಗಳ ಬೆಳವಣಿಗೆಗೆ ಸಹಕಾರಿ ಆಗಿರುವ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಯುವ ಪೀಡಿಗೆಯ ಮುಂದಿದೆ ಎಂದರು.
ಮುಂಬಾರು ಗ್ರಾಪಂ ಅಧ್ಯಕ್ಷ ನಾಗರಾಜ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲೆ ಸಾಹಿತ್ಯದ ಅಭಿರುಚಿ ಹೊಂದುವಂತೆ ಮಕ್ಕಳಿಗೆ ಸಲಹೆ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಕೆಸವಿನಮನೆ ರತ್ನಾಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ದತ್ತಿದಾನಿಗಳಾದ ಎನ್. ವಿನಾಯಕ ಉಡುಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ, ನಗರ ರಮೇಶ್, ಕೃಷಿ ಇಲಾಖೆಯ ನಿವೃತ್ತ ನೌಕರ ಮಹಾಬಲ, ನಿವೃತ್ತ ಶಿಕ್ಷಕ ಕುಮಾರಸ್ವಾಮಿ, ಶಿವಾನಂದ, ಮುಖ್ಯ ಶಿಕ್ಷಕಿ ಸುಜಾತ, ವಾಣಿಶ್ರೀ, ಗ್ರಂಥಪಾಲಕ ರಾಮಕೃಷ್ಣ ಹಾಜರಿದ್ದರು.