'ಬೆಳ್ಳಿಮಂಡಲ'ದಿಂದ ಚಿತ್ರೋತ್ಸವ
ಶಿವಮೊಗ್ಗ: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಂಗ ಸಂಸ್ಥೆಯಾದ ಬೆಳ್ಳಿಮಂಡಲ, ಸಿನಿಮೊಗ್ಗೆ ಶಿವಮೊಗ್ಗ ಚಿತ್ರ ಸಮಾಜ ಹಾಗೂ ವಾರ್ತಾ ಇಲಾಖೆಗಳ ವತಿಯಿಂದ ಫೆ. 24ರಿಂದ 26ರವರೆಗೆ ಕರ್ನಾಟಕ ಸಂಘ ಭವನದಲ್ಲಿ ನಿತ್ಯ ಸಂಜೆ 6.30ಕ್ಕೆ ಫೆಬ್ರವರಿ ತಿಂಗಳ ಚಿತ್ರೋತ್ಸವ ಆಯೋಜಿಸಲಾಗಿದೆ.
ಈ ಚಿತ್ರೋತ್ಸವದಲ್ಲಿ ಅಪರೂಪ ಎನ್ನಬಹುದಾದ ಮೂರು ಭಾಷೆಗಳ, ಮೂರು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಕುವೆಂಪು ವಿವಿ ಪ್ರಸಾರಾಂಗದ ನಿರ್ದೇಶಕ ಡಾ. ಪ್ರಶಾಂತ್ ನಾಯಕ್ ಉದ್ಘಾಟಿಸಲಿದ್ದಾರೆ. ನಂತರ ಚಿತ್ರೋತ್ಸವದ ಮೊದಲ ಚಿತ್ರವಾಗಿ ಫ್ರೆಂಚ್ ಭಾಷೆಯ ಟಿಕೆಟ್ಸ್ (2005) 109 ನಿಮಿಷ, ನಿರ್ದೇಶನ- ಅಬ್ಬಾಸ್ ಕಿರೊಸ್ಟಮಿ ಮತ್ತು ಕೆನ್ಲ್ಚೂಚಿಚಿ) ಪ್ರದರ್ಶನಗೊಳ್ಳಲಿದೆ. ಇಟಲಿ ಮತ್ತು ರೋಮ್ ನಡುವಿನ ಪಯಣದ ಒಂದು ಸುಂದರ ಕಥೆಯಿದು.
ಫೆ. 25ರಂದು ಇಟಲಿಯ ವಿ ಹ್ಯಾವ್ ದಿ ಪೋಪ್ (2011, 102 ನಿಮಿಷ, ನಿರ್ದೇಶನ- ನನ್ನೀ ಮರೋಟ್ಟೆ) ಚಿತ್ರ ಪ್ರದರ್ಶನ- ಸಂವಾದವಿದೆ. ಈ ಎರಡೂ ಚಿತ್ರಗಳನ್ನು ಕುರಿತು, ಉಪನ್ಯಾಸಕ ಅರವಿಂದ್ಕುಮಾರ್ ವಿಶ್ಲೇಷಣೆ ನಡೆಸಲಿದ್ದಾರೆ. ಫೆ. 26ರಂದು ಕನ್ನಡದ ಮೌನಿ (ಕನ್ನಡ, 2003, 127ನಿಮಿಷ, ನಿರ್ದೇಶನ- ಬಿ. ಎಸ್. ಲಿಂಗದೇವರು) ಚಿತ್ರ ಪ್ರದರ್ಶನವಿದ್ದು, ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಸಂವಾದ ನಡೆಸಲಿದ್ದಾರೆ.
ಒಂದು ಅಪರೂಪದ ಚಿತ್ರ ಇದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರ ಸಣ್ಣ ಕಥೆ ಆಧರಿಸಿದ ಈ ಚಿತ್ರಕ್ಕೆ ಜಿ.ಎಸ್. ಸದಾಶಿವ, ಉದಯ ಮರಕಿಣಿ, ಜೋಗಿ ಚಿತ್ರಕಥೆ ಒದಗಿಸಿದ್ದಾರೆ. ಅಡಕೆ ಕೃಷಿಕರ ಕುಟುಂಬದ ಸುತ್ತ ಹೆಣೆದಿರುವ ಈ ಚಿತ್ರದ ಕಥೆಯಲ್ಲಿ ವರ್ತಮಾನದ ಸಂದರ್ಭದಲ್ಲಿಯೂ ಅನ್ವಯವಾಗುವ ಸಂಗತಿಗಳಿವೆ. ಅಡಕೆ ಬೆಲೆಗಳಲ್ಲಾಗುವ ಏರುಪೇರುಗಳಿಂದ ಇಡೀ ಕುಟುಂಬ ಅನುಭವಿಸುವ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲಾಗಿದೆ. ಚಿತ್ರವನ್ನು ಸಂಪೂರ್ಣವಾಗಿ ತೀರ್ಥಹಳ್ಳಿ ಸುತ್ತಮುತ್ತಲಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿರವುದರ ಜತೆಗೆ ದತ್ತಾತ್ರೇಯರವರಿಗೆ ಶ್ರೇಷ್ಠ ನಟ ಪ್ರಶಸ್ತಿ, ಡಾ. ಅನಂತಮೂರ್ತಿಯವರಿಗೆ ಶ್ರೇಷ್ಠ ಕಥೆ ಪ್ರಶಸ್ತಿಯೂ ಲಭಿಸಿದೆ. ಪ್ರತಿ ಚಿತ್ರ ಪ್ರದರ್ಶನಕ್ಕೆ ಪೋಷಕ ಸದಸ್ಯರಲ್ಲವವರಿಗೆ 20 ಪ್ರವೇಶ ಶುಲ್ಕವಿದ್ದು, ಶಿವಮೊಗ್ಗ ಬೆಳ್ಳಿಮಂಡಲ ಪೋಷಕ ಸದಸ್ಯರು, ಚಲನಚಿತ್ರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.