ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಸೂಚನೆ
ಶಿವಮೊಗ್ಗ: ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಟ ಎರಡು ಎಕರೆ ನಿವೇಶನ ಗುರುತಿಸಿ, ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಅವರು ಜಿಲ್ಲಾ ಪಂಚಾಯ್ತಿಯನ್ನು ಕೋರಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅವರು, ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವಂತೆ ನ್ಯಾಯಾಲಯದ ಆದೇಶವಿದ್ದು, ಸ್ಥಾಪನೆ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹಾಗೂ ಪಿಡಿಓಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸೂಕ್ತ ಸ್ಥಳ ಗುರುತಿಸಬೇಕಾಗಿದೆ ಎಂದರು. ಜಿಲ್ಲೆಯ ವಿವಿಧ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೌಚಾಲಯ ಕೊರತೆ ನೀಗಿಸುವ ಅಗತ್ಯವಿದೆ. ಇದಕ್ಕಾಗಿ 300ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಬೇಕಾಗಿದೆ ಎಂದು ಡಿಡಿಪಿಐ ಅವರ ಮಾಹಿತಿ ಮೇರೆಗೆ ಸಿಇಓ ಸಸಿಕಾಂತ್ ಸೆಂಥಿಲ್, ಸ್ಥಳೀಯ ಸಂಸ್ಥೆಗಳು ಸೂಕ್ತ ಅನುದಾನ ನಿಗದಿಪಡಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಬಿಇಓ ಹಾಗೂ ಆಯುಕ್ತರು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸೋಲಾರ್ ಅಳವಡಿಕೆ ಕುರಿತು ನಗರಾಭಿವೃದ್ಧಿ ಶಾಖೆ ಯೋಜನಾ ನಿರ್ದೇಶಕ ರಾಜಪ್ಪ ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಈಸೂರು ಬಸವರಾಜ್ ಅವರು ಕುಡಿವ ನೀರು, ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದರು. ಮಹಾನಗರ ಪಾಲಿಕೆ ಮಹಾಪೌರರಾದ ಖುರ್ಷಿದಾ ಬಾನು, ಯೋಜನಾ ಸಮಿತಿ ಸದಸ್ಯರಾದ ಕೃಷ್ಣೇಗೌಡ, ಮಲ್ಲಮ್ಮ, ಶಾಂತಮ್ಮ, ಶೃತಿ ವೆಂಕಟೇಶ್ ಪಾಟೀಲ್ ಇದ್ದರು.