'ಪೋಲಿಯೊ ಮುಕ್ತ ಭಾರತ ಹೆಮ್ಮೆಯ ಸಂಗತಿ'
ಕ.ಪ್ರ.ವಾರ್ತೆ , ತೀರ್ಥಹಳ್ಳಿ , ಫೆ. 23
ಹಿಂದೊಮ್ಮೆ ಭಾರತದಂತಹ ದೊಡ್ಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರ ಪೋಲಿಯೊ ನಿರ್ಮೂಲನೆಯ ಕನಸನ್ನು ಹೊತ್ತು ಕಾರ್ಯಾರಂಭ ಮಾಡಿದಾಗ ಗುರಿ ಮುಟ್ಟುವ ಬಗ್ಗೆ ಸಂಶಯಿಸಿದ್ದವರೇ ಅಧಿಕ. ಆದರೆ, ನಾವು ಜಗತ್ತೇ ಅಚ್ಚರಿ ಪಡುವಂತೆ ನಿರ್ಮೂಲನೆಯ ಗುರಿ ಸಾಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ಇದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಸಂತೋಷಪಡುವ ವಿಷಯ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ನಡೆದ ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಭಿನಂದನಾರ್ಹರು: ಈ ಯಶಸ್ಸಿನ ಹಿಂದಿರುವುದು ಸಂಘಟಿತ ಪ್ರಯತ್ನ. ಸರ್ಕಾದ ವಿವಿಧ ಇಲಾಖೆಗಳು, ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮಗಳು ಮತ್ತು ಸಮುದಾಯ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ ದೇಶದಲ್ಲಿ ಪೋಲಿಯೊ ರೋಗ ನಿರ್ಮೂಲನೆಗೊಳ್ಳುವಂತಾಗಿದೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು.
ಗುರಿ ತಲುಪಿದ ಖುಷಿಯಲ್ಲಿ ನಾವು ಮೈಮರೆಯುವಂತಿಲ್ಲ. ನಮ್ಮ ಹತ್ತಿರದ ಕೆಲವು ದೇಶಗಳಲ್ಲಿನ್ನೂ ಈ ರೋಗ ತೊಲಗಿಲ್ಲ. ಹಾಗಾಗಿ ಅಲ್ಲಿಂದ ಮತ್ತದು ಪ್ರವೇಶಿಸುವ ಸಾಧ್ಯತೆಯಿದೆ. ಆದ್ದರಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಪಲ್ಸ್ ಪೋಲಿಯೊ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಹೇಳಿದರು.
ನೆಮ್ಮದಿ: ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಲ್. ಸುಂದರೇಶ್ ಮಾತನಾಡಿ, ಪೋಲಿಯೊದಂತಹ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ಮೂಲಕ ಈ ರೋಗಕ್ಕೆ ಬಲಿಯಾಗಬೇಕಿದ್ದ ಅದೆಷ್ಟೋ ಮಕ್ಕಳನ್ನು ಕಾಪಾಡಿದಂತಾಗಿದ್ದು, ನೋವು, ಕಣ್ಣೀರಿನಲ್ಲೇ ಬದುಕಬೇಕಾಗಿದ್ದ ಅದೆಷ್ಟೋ ಪೋಷಕರಿಂದು ಭಯಮುಕ್ತ ವಾತಾವರಣದಲ್ಲಿ ನೆಮ್ಮದಿಯಿಂದ ಬಾಳುವಂತಾಗಿದೆ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಕೆ. ಎಸ್., ಜೆಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ್, ಮಕ್ಕಳ ತಜ್ಞ ಡಾ. ಪ್ರಭಾಕರ್, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿ. ಕೆ. ಮಂಜುನಾಥ್, ರೋಟರಿ ಕ್ಲಬ್ ಅಧ್ಯಕ್ಷ ಗಿರೀಶ್ ಆರೋಗ್ಯ ಇಲಾಖಾ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.