ವೈದ್ಯ ಸಾಹಿತ್ಯ ಹೆಚ್ಚಲಿ: ನಾ. ಡಿಸೋಜ
ಕ.ಪ್ರ.ವಾರ್ತೆ , ಶಿವಮೊಗ್ಗ , ಫೆ. 23
ವೈದ್ಯಕೀಯ ಪುಸ್ತಕ ಹೆಚ್ಚು ಓದುವ ಅರಿವು ಇಂದು ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವೈದ್ಯರೂ ಕೂಡ ಹೆಚ್ಚು ಬರೆಯುವುದರ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಬೇಕು ಎಂದು ಹಿರಿಯ ಸಾಹಿತಿ ನಾ. ಡಿಸೋಜ ಹೇಳಿದರು.
ಕರ್ನಾಟಕ ಸಂಘ ಭವನದಲ್ಲಿ ಭಾನುವಾರ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ವೈದ್ಯಕೀಯ ಸಂಘ ಹಮ್ಮಿಕೊಂಡ ಒಂದು ದಿನದ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯನ್ನಾಗಿಸಿಕೊಂಡವರು ವೈದ್ಯರಾಗಿ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಕಾಪಾಡುವ ಜೊತೆಗೆ ಸಾಹಿತ್ಯ ರಚನೆ ಮಾಡಿ, ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುತ್ತಿದ್ದಾರೆ. ಈ ರೀತಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕೆಂದರು.
ವಿದೇಶದಲ್ಲಿ ಎಲ್ಲಾ ಕ್ಷೇತ್ರಗಳವರು ದಿನಚರಿ ಬರೆಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಕಾಶವಿದೆ. ಇದೇ ಕಾರಣದಿಂದ ಇಂಗ್ಲಿಷ್ ಹೆಚ್ಚು ಅವಲಂಬನೆ ಮಾಡುತ್ತಾರೆ. ನಮ್ಮ ವೈದ್ಯಕೀಯ ಕ್ಷೇತ್ರದವರು ದಾಖಲು ಮಾಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾಹಿತ್ಯ ವಿಸ್ತಾರವಾಗಿ ಬೆಳೆಯಬೇಕು. ಸಾಹಿತ್ಯ ಎಂದರೆ ನಾಟಕ, ಕಾವ್ಯ, ಕಾದಂಬರಿ ಅಷ್ಟೇ ಅಲ್ಲ ಎಂದು ತಿಳಿಸಿದರು.
ಸಾಕಷ್ಟು ಶ್ರಮ: ವಿಶೇಷವೆಂದರೆ ಸಾಹಿತಿಗೆ ಕಥೆಯನ್ನು ಸೃಷ್ಟಿಸಬೇಕು. ಸಾಕಷ್ಟು ಶ್ರಮಪಡಬೇಕು, ದಾಖಲೆ ಮಾಡಿಕೊಳ್ಳಬೇಕು. ಆದರೆ, ವೈದ್ಯರ ಬಳಿಗೇ ಕಥೆ ಬರುತ್ತದೆ. ವೈದ್ಯರೂ ಕೂಡ ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತಾಗಬೇಕು. ಮನೋವೈದ್ಯ ಅಶೋಕ್ ಪೈ ಮಾತನಾಡಿ, ವೈದ್ಯರು ಮೂಲತಃ ಸಾಹಿತಿಗಳಾಗಿರುತ್ತಾರೆ. ವೈದ್ಯಕೀಯ ವೃತ್ತಿಯಲ್ಲಿನ ಚಟವಟಿಕೆ, ಅಧ್ಯಯನ ಸಾಹಿತಿಯನ್ನಾಗಿ ಮಾಡುತ್ತದೆ. ವೈದ್ಯನಾದವನು ಬರವಣಿಗೆ ಮೂಲಕ ಈ ಅವಕಾಶ ಬಳಸಿಕೊಳ್ಳಬೇಕು ಎಂದರು.
ಶಿವಮೊಗ್ಗ ಜಿಲ್ಲೆ ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ವೈದ್ಯಕೀಯ ಸಾಹಿತಿಗಳು ಬಂಡಾಯ, ನವೋದಯ ಸೇರಿದಂತೆ ಯಾವುದೇ ಕ್ಲಿಷೆಗೆ ಸಿಕ್ಕಿಕೊಂಡಿಲ್ಲ ಎಂದು ಹೇಳಿದರು.
ಓದುಗರ ಸಂಖ್ಯೆ ಹೆಚ್ಚಳ: ಇಂದು ವೈದ್ಯಕೀಯ ಬರಹಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪುಸ್ತಕ ಮಾರಾಟದಲ್ಲಿ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಪುಸ್ತಕಗಳೇ ಕಂಡುಬರುತ್ತದೆ. ಆಳವಾದ ಅಧ್ಯಯನವಿಲ್ಲದ ಪುಸ್ತಕಗಳೇ ಜನರಿಗೆ ಸಿಗುತ್ತಿದೆ. ಹೀಗಾಗಿ ವೈದ್ಯರು ತಮ್ಮ ಅಧ್ಯಯನವನ್ನು ಬರಹರೂಪಕ್ಕಿಳಿಸಿ, ತಮಗೆ ತಿಳಿದ ವಿಷಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ಹಂಬಲ ಹೊಂದಬೇಕು ಎಂದು ಹೇಳಿದರು.
ವೈದ್ಯರು ಶಿಕ್ಷಕರು ಹೌದು, ಮಾರ್ಗದರ್ಶಕರೂ ಹೌದು, ಸಾಹಿತಿಗಳು ಹೌದು. ಹಾಗೆಯೇ ಅನೇಕ ಸವಾಲುಗಳನ್ನೂ ಸಹ ಎದುರಿಸುತ್ತಿದ್ದಾರೆ. ವೈದ್ಯರ ಬರವಣಿಗೆ ಸಾಹಿತ್ಯಿಕವಾಗಿ ಇರದೇ ಇರಬಹುದು. ಆದರೆ ವಸ್ತುನಿಷ್ಠತೆಯಿಂದ ಕೂಡಿರುತ್ತದೆ ಎಂದು ಹೇಳಿದರು.
ರಚನೆಯಾಗುತ್ತಿರುವ ವೈದ್ಯ ಸಾಹಿತ್ಯ ಚೆನ್ನಾಗಿದೆ, ಚೆನ್ನಾಗಿಲ್ಲ ಎಂಬುದಕ್ಕಿಂತ ಅದು ವಸ್ತುನಿಷ್ಠತೆಯಿಂದ ಇರುತ್ತದೆ ಎಂಬುದನ್ನು ಅರಿಯಬೇಕು. ಒಟ್ಟಾರೆ ವೈದ್ಯರಲ್ಲದವರೂ ವೈದ್ಯಕೀಯ ಕ್ಷೇತ್ರದ ಬಗ್ಗೆ, ವೈದ್ಯರು ವೈದ್ಯಕೀಯ ಕ್ಷೇತ್ರದ ಬರೆಯುವ ಮೂಲಕ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿದೆ. ಇದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಕೇಶಮೂರ್ತಿ, ವಾಣಿಕೋರಿ, ಗುರುದತ್, ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.