ಸಮಸ್ಯೆ ಪರಿಹರಿಸಲು ಆಗ್ರಹ
ಕ.ಪ್ರ.ವಾರ್ತೆ , ಶಿಕಾರಿಪುರ , ಫೆ. 23
ಸೇವಾ ಭದ್ರತೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದರಿಂದ ರಾಜ್ಯಾದ್ಯಂತ ಸಾವಿರಾರು ಅತಿಥಿ ಉಪನ್ಯಾಸಕರು ಆತಂಕಕ್ಕೀಡಾಗಿದ್ದು, ಈ ಕೂಡಲೇ ಸಮಸ್ಯೆ ಪರಿಹಾರದ ಜತೆಗೆ ತ್ರಿಶಂಕು ಸ್ಥಿತಿಯ ಉಪನ್ಯಾಸಕರ ಕುಟುಂಬವನ್ನು ಪಾರು ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ಶಿಕಾರಿಪುರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿರವರನ್ನು ಭೇಟಿ ಮಾಡಿದ ಅತಿಥಿ ಉಪನ್ಯಾಸಕರು ತಮ್ಮ ಗೋಳನ್ನು ವಿವರಿಸಿದರು.
ಉನ್ನತ ಶಿಕ್ಷಣ ಆರ್.ವಿ ದೇಶಪಾಂಡೆರವರು ವೇತನ ಹೆಚ್ಚಳ, ಸೇವಾ ಭದ್ರತೆ ಮತ್ತಿತರ ಕನಿಷ್ಠ ಸೌಲಭ್ಯಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸದಿರುವುದರಿಂದ ಬಜೆಟ್‌ನಲ್ಲಿ ಸರ್ಕಾರದಿಂದ ಅತಿಥಿ ಉಪನ್ಯಾಸಕರ ಸಮಸ್ಯೆ ಬಗ್ಗೆ ಸೂಕ್ತ ನಿರ್ಧಾರವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಹತ್ತಾರು ವರ್ಷದಿಂದ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರನ್ನು ಆತಂಕಕ್ಕೀಡುಮಾಡಿದೆ ಎಂದರು.
ಇದಕ್ಕೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಅತಿಥಿ ಉಪನ್ಯಾಸಕ ನರಹರಿ, ಅರ್ಪಿತಾ, ಶ್ವೇತಾ, ಬಸವರಾಜ್, ರುದ್ರಮುನಿ, ಮಂಜುನಾಥ್ ನಾಯ್ಕ್, ದೀಪಿಕಾ, ಸುಧೀರ್ ಮೊದಲಾದರು ಹಾಜರಿದ್ದರು.