ಅಸಮರ್ಪಕ ವಿದ್ಯುತ್;ರೈತರ ಪ್ರತಿಭಟನೆ
ಸೊರಬ: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಮೂಲಕ ದೇಶಕ್ಕೆ ಅನ್ನ ನೀಡುವ ಕೃಷಿಕ ವರ್ಗವನ್ನು ಕತ್ತಲೆಯಲ್ಲಿ ಕೂರಿಸಿದ ಕೀರ್ತಿ ಆಡಳಿತ ಸರ್ಕಾರದ್ದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ ಕಿಡಿಕಾರಿದರು.
ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕ ಕಾರ್ಯಕರ್ತರು ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿ ಮೆಸ್ಕಾಂ ಎಇಇಗೆ ಮಂಗಳವಾರ ಮನವಿ ಸಲ್ಲಿಸಿದರು.
ವಿದ್ಯಾಭ್ಯಾಸಕ್ಕೆ ತೊಂದರೆ: ಸರ್ಕಾರದಿಂದ 7 ತಾಸು 3 ಫೇಸ್ ಹಾಗೂ 7 ತಾಸು ಸಿಂಗಲ್ ಫೇಸ್ ವಿದ್ಯುತ್ ನೀಡಲು ಆದೇಶವಿದೆ. ಆದರೆ, 4-5 ತಾಸು 3 ಫೇಸ್ ಹಾಗೂ 3 ತಾಸು ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಕೆಲವು ಹಳ್ಳಿಗಳಿಗೆ ಶಿಕಾರಿಪುರ ತಾಲೂಕು ಬಳ್ಳಿಗಾವಿ ಘಟಕದಿಂದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಂಜೆ 6 ಗಂಟೆಗೆ ಅರ್ಧ ತಾಸು ವಿದ್ಯುತ್ ನೀಡಿ, ನಂತರ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳಿಸುತ್ತಾರೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಶಿಕಾರಿಪುರ ಸಹಾಯಕ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಉಡಾಫೆ ಮಾತು ಆಡುತ್ತಾರೆ. ರೈತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ರೈತ ವಿರೋಧಿ ನೀತಿ ಅನುಸರಿಸಿ ತಾಲೂಕನ್ನು ಕತ್ತಲೆಯಲ್ಲಿಡುತ್ತಿದ್ದಾರೆ. ಇದೇ ರೀತಿ ಅನಾನುಕೂಲ ಮುಂದುವರಿದರೆ ರೈತ ಸಂಘದಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಂಘದ ಉಮೇಶ್ ಪಟೇಲ್, ಸೈಯದ್ ಶಫೀವುಲ್ಲಾ, ಭಾಷಾಸಾಬ್ ಆರೇಕೊಪ್ಪ, ರಾಮಕೃಷ್ಣ, ರಾಮಚಂದ್ರ, ದಿನೇಶ್, ಕೃಷ್ಣಪ್ಪ ಮೊದಲಾದವರು ಪಾಲ್ಗೊಂಡಿದ್ದರು.