ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರ್ಸು
ಸಾಗರ: ಬಡಜನರಿಗೆ ನೀಡುತ್ತಿರುವ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸೋಮವಾರ ನಡೆದ ತಾಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಕಾಶ್ ಶಾವಿಗೆರೆ, ಆಹಾರ ಇಲಾಖೆ ಅಧಿಕಾರಿಗಳು ಬಿ.ಪಿ.ಎಲ್. ಕಾರ್ಡ್ ಪಡೆಯಲು ಬರುವವರಿಂದ ಒಂದರಿಂದ ಎರಡು ಸಾವಿರ ರೂಪಾಯಿವರೆಗೆ ಲಂಚ ಪಡೆಯುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದರು.
ಸ್ಪೀಕರ್‌ಗೆ ತಪ್ಪು ಮಾಹಿತಿ: ಸದಸ್ಯ ಮಹಾಬಲೇಶ್ವರ ಕುಗ್ವೆ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಪಡಿತರಚೀಟಿ ವಿತರಣೆಗೆ ಚಾಲನೆ ನೀಡಿ ಸಾಕೇಂತಿಕವಾಗಿ 12 ಜನರಿಗೆ ಕಾರ್ಡ್ ವಿತರಣೆ ಮಾಡಿದ್ದಾರೆ. ಅಧಿಕಾರಿಗಳು ಎರಡು ಸಾವಿರ ಕಾರ್ಡ್ ಸಿದ್ಧವಿರುವುದಾಗಿ ಹೇಳಿದ್ದರು. ಆದರೆ ಈತನಕ ಅರ್ಹರಿಗೆ ಕಾರ್ಡ್ ವಿತರಣೆ ಮಾಡಿಲ್ಲ. ಸ್ಪೀಕರ್‌ಗೆ ಸುಳ್ಳು ಹೇಳುವ ಇವರು ಜನಸಾಮಾನ್ಯರಿಗೆ ಮೋಸ ಮಾಡದೆ ಇರಲಾರರು. ಆಹಾರ ಇಲಾಖೆಯಲ್ಲಿ ಲಂಚ ಪಡೆಯುತ್ತಿರುವ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಸಭೆ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಹರೀಶ್ ಗಂಟೆ ಮಾತನಾಡಿ, ಪಡಿತರ ಕಾರ್ಡ್ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಹಸೀಲ್ದಾರರಿಗೆ ಶಿಫಾರಸು ಮಾಡಲಾಗುವುದು. ಸಾರ್ವಜನಿಕರು ಪಡಿತರ ಚೀಟಿ ಪಡೆಯಲು ಹಣ ಕೇಳುವ ಅಧಿಕಾರಿ ವಿರುದ್ಧ ದೂರು ನೀಡಬೇಕು. ಫಲಾನುಭವಿಗಳು ತಾಲ್ಲೂಕು ಕಚೇರಿಗೆ ಬಂದು ಕಾರ್ಡ್ ಪಡೆಯುವ ಬದಲು ಗ್ರಾಮ ಪಂಚಾಯ್ತಿ ಹಂತದಲ್ಲಿಯೆ ಕಾರ್ಡ್ ವಿತರಣೆ ಮಾಡುವಂತೆ ತಹಶೀಲ್ದಾರ್ಗೆ ಸೂಚನೆ ನೀಡಲಾಗುವುದು ಎಂದರು.
ತನಿಖೆಗೆ ಸಮಿತಿ ರಚಿಸಿ: ತೋಟಗಾರಿಕೆ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಸಮಿತಿಯೊಂದನ್ನು ರಚಿಸಬೇಕು. ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟಂತಹ ಶಿವಮೊಗ್ಗ ರಸ್ತೆಯಲ್ಲಿರುವ ಜಾಗ ಸುಮಾರು 24 ಎಕರೆ ಅತಿಕ್ರಮಣವಾಗಿದ್ದು, ಈ ಜಾಗದ ಸರ್ವೆ ಕಾರ್ಯ ನಡೆಸಿ, ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಪಾರ್ವತಿ ಈಶ್ವರ್, ಜ್ಯೋತಿ ಮುರಳಿಧರ್, ನಾಗರಾಜ ಮಂಜಿನಕಾನು, ಷಣ್ಮುಖಪ್ಪ, ಶ್ಯಾಮಲ ದೇವರಾಜ್ ಒತ್ತಾಯಿಸಿದರು.
ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾಧಿಕಾರಿ ಟಿ.ಸಿದ್ದಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.