'ಸಾಹಿತ್ಯ, ಸಂಸ್ಕೃತಿ ಅಭಿವೃದ್ಧಿಗೆ ಶ್ರಮಿಸಿ'
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಫೆ.25
ಮಯೂರವರ್ಮ ಆಳಿದ ನಾಡಿನ ಈ ಭಾಗದಲ್ಲಿ ಉತ್ತಮ ಪರಿಸರ, ಸಂಸ್ಕೃತಿಯಿದೆ. ಸಾಹಿತ್ಯ ಬೆಳಸಲು ಉತ್ತಮ ವಾತಾವರಣವಿದೆ. ಈ ಭಾಗದಲ್ಲಿ ಸಾಹಿತ್ಯ ಕಾರ್ಯ ಬೆಳೆಯಬೇಕು ಎಂದು ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯಾತ್ಮಕವಾಗಿ ನಾವು ಬೆಳೆಯಬೇಕು ಮತ್ತು ಅದಕ್ಕೆ ಪೂರಕವಾಗಿ ಸಾಹಿತ್ಯ ಚಟುವಟಿಕೆ ನಡೆಸಬೇಕು ಎಂಬ ಉದ್ದೇಶವಿದ್ದಾಗ ನಾಗರಿಕರು ಪ್ರಭುದ್ಧರಾಗುತ್ತಾರೆ ಎಂದ ಅವರು, ಪಟ್ಟಣದಲ್ಲಿ ಕಸಾಪ ಕಚೇರಿಯಿದ್ದು, ಕನ್ನಡ ಸಾಹಿತ್ಯ-ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಶಿವರಂಜನಿ ಸುದರ್ಶನ ಮಾತನಾಡಿ, ಮದ್ದು ಗುಂಡು ಸಂಸ್ಕೃತಿಯಿಂದ ನಾಡು ಕಟ್ಟಲು ಆಗುವುದಿಲ್ಲ. ಬದಲಾಗಿ ಸಾಹಿತ್ಯ ಸಂಸ್ಕೃತಿಯಿಂದ ಸುಂದರ ಮತ್ತು ಉತ್ತಮ ನಾಡು ಕಟ್ಟೋಣ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕು ದಂಡಾಧಿಕಾರಿ ಧರ್ಮೋಜಿರಾವ್ ಮಾತನಾಡಿ ಶುಭ ಹಾರೈಸಿ ನಂತರ ಶಿವರುದ್ರಪ್ಪ ಅವರ ಭಾವಗೀತೆ ಹಾಡಿ ರಂಜಿಸಿದರು.
ಮುಖ್ಯ ಅತಿಥಿಯಾಗಿ ಡಾ.ಮುರಘರಾಜ್, ವೈದ್ಯ ಗಂಗಾಧರ ನಾಯರ್, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ದತ್ತಿದಾನಿಗಳಾದ ಚಿನ್ನಪ್ಪ ಓಬಳೇರ್, ರತ್ನಮ್ಮ ಚಂದ್ರಶೇಖರ್ ಶೆರೆಗಾರ್ ಇತರರು ಹಾಜರಿದ್ದರು.
'ಧರ್ಮ ಮತ್ತು ಸಾಹಿತ್ಯ' ವಿಷಯ ಕುರಿತು ಶಿವಮೊಗ್ಗ ಡಿವಿಎಸ್ ಕಾಲೇಜಿನ ಉಪನ್ಯಾಸಕ ಕೆ.ಜಿ.ವೆಂಕಟೇಶ್, ಹಾಗೂ 'ಸರ್ವಜ್ಞನ ವಿಚಾರ ಧಾರೆಗಳು' ವಿಷಯ ಕುರಿತು ಸುಧಾಕರ್ ಹಿರೇಕಸವಿ ಉಪನ್ಯಾಸ ನೀಡಿದರು.