ನಾಳೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಶಿವಮೊಗ್ಗ: ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಮ್ಮಿಕೊಂಡಿದ್ದು, ಕಾರ್ಯಕ್ರಮ ಫೆ.28ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಗ್ಲೋಬಲ್ ಎಜ್ಯುಕೇಶನ್ ಸೊಸೈಟಿ, ಸೈನ್ಸ್ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯುವುದು.
ಅಂದು ಇಸ್ರೋ ವಿಜ್ಞಾನಿಗಳು ಆಗಮಿಸಲಿದ್ದು, 1,000 ವಿದ್ಯಾರ್ಥಿಗಳು ಹಾಗೂ 200 ಶಿಕ್ಷಕರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಗ್ಲೋಬಲ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಎನ್. ರಮೇಶ್ ಕಾರ್ಯಕ್ರಮದ ವಿವರ ನೀಡಿದರು.
ಮುಖ್ಯ ಅತಿಥಿಗಳಾಗಿ ಇಸ್ರೋ ನಿರ್ದೇಶಕ ಎಚ್.ಎನ್. ಮಧುಸೂದನ್, ದೇವಿಪ್ರಸಾದ್ ಕರಣಿಕ ಭಾಗವಹಿಸುವರು. ಜತೆಗೆ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಫುಲ್ ಬನ್ಸಲ್, ಜಿ.ಪಂ. ಸಿಇಒ ಸಸಿಕಾಂತ್ ಸೆಂಥಿಲ್, ಡಿಡಿಪಿಐ ಬಿ.ಸಿ. ಬಸವರಾಜಪ್ಪ, ಡಿಡಿಪಿಯು ಎಚ್. ಇಂದುಮತಿ, ಡಯಟ್ ಪ್ರಾಂಶುಪಾಲರಾದ ಎಸ್.ಇ. ಗಾಯತ್ರಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಜಿ.ಎಸ್. ನಾಗರಾಜ್ ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಜ್ಞಾನ ಪರಿಷತ್ತು ಜಿಲ್ಲಾಧ್ಯಕ್ಷ ಶೇಖರ್ ಗೌಳೇರ್ ಇದ್ದರು.