ನಿವೇಶನ ಅಕ್ರಮ: ದೂರಿಗೆ ಮನವಿ
ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು ಇದುವರೆಗೆ ನಗರದ ವಿವಿಧೆಡೆಗಳಲ್ಲಿ ಬಡಾವಣೆ ರಚಿಸಿ, ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಅಕ್ರಮಗಳ ಕುರಿತು ಪರಿಶೀಲನೆ ನಡೆಸಲು ಪರಿಶೀಲನಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ನೀಡುವ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲು ಇತ್ತೀಚೆಗೆ ನಡೆದ ಪ್ರಾಧಿಕಾರದ ತುರ್ತುಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ ತಿಳಿಸಿದ್ದಾರೆ.
ಪರಿಶೀಲನಾ ಸಮಿತಿಯು ತನ್ನ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾರ್ವಜನಿಕರು ಸಮಿತಿಗೆ ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ನಿಯಮ ಉಲ್ಲಂಘನೆ: ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಆಗಿರುವ ನ್ಯೂನ್ಯತೆಗಳು ಅಥವಾ ಅಕ್ರಮಗಳು ಅಂದರೆ, ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚಿನ ಸದಸ್ಯರು ನಿವೇಶನ ಪಡೆದಿರುವುದು ಅಥವಾ ಈಗಾಗಲೇ ಯಾವುದೇ ಪ್ರಾಧಿಕಾರದಿಂದ ಯಾವುದೇ ವ್ಯಕ್ತಿಗೆ ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ ಅಥವಾ ಸರ್ಕಾರಿ ಏಜೆನ್ಸಿ ವತಿಯಿಂದ ಅಥವಾ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಹಂಚಿಕೆಯಾಗಿದ್ದು, ಪುನಃ ನಿವೇಶನ ಪಡೆದಿದ್ದರೆ ಅದು ನಿಯಮ ಉಲ್ಲಂಘನೆಯಾಗುತ್ತದೆ.
ಅಂತಹ ಮಾಹಿತಿಯನ್ನು ಸದಸ್ಯ ಕಾರ್ಯದರ್ಶಿ, ನಿವೇಶನ ಹಂಚಿಕೆ ಪರಿಶೀಲನಾ ಸಮಿತಿ ಹಾಗೂ ಆಯುಕ್ತರು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ, ವಿನೋಬ ನಗರ, ಶಿವಮೊಗ್ಗ ವಿಳಾಸಕ್ಕೆ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಮಾಹಿತಿಯನ್ನು ಮಾರ್ಚ್ 10ರೊಳಗಾಗಿ ಸಲ್ಲಿಸಬಹುದಾಗಿದೆ. ಮಾಹಿತಿದಾರರು ಇಚ್ಚಿಸಿದಲ್ಲಿ ಅವರ ಹೆಸರು, ವಿಳಾಸವನ್ನು ಗೌಪ್ಯವಾಗಿರಿಸಲಾಗುವುದೆಂದು ಅವರು ತಿಳಿಸಿದ್ದಾರೆ.