ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮಾಧಾನ ತಂದ ಸಂಸತ್ ಅವಧಿ

Lingaraj Badiger
Updated On : 27 Feb 2014, 10:28 am

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.26
ಲೋಕಸಭಾ ಸದಸ್ಯನಾಗಿ ಸೇವೆ ಸಲ್ಲಿಸಿದ ಕಳೆದ ಅವಧಿ ಸಮಾಧಾನ ತಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾ ನದಿಗೆ ತಡೆಗೋಡೆಗೆ ಕೇಂದ್ರದ ನೆರವು ಸಿಕ್ಕಿದೆ. ಹೊಸ ರೈಲುಗಳ ಓಡಾಟ ಆರಂಭವಾಗಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಸಂಸದರ ನಿಧಿ ಸಮರ್ಪಕ ಬಳಕೆಯಾಗಿದೆ ಎಂದು ತಮ್ಮ ಸಾಧನೆಗಳ ಪಟ್ಟಿ ಮಾಡಿದರು.
ಆದರೆ ಪಿಎಂಜಿಎಸ್ ವೈ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 3 ವರ್ಷ ಅನುದಾನ ಸಿಗಲೇ ಇಲ್ಲ. ಜಿಲ್ಲೆಯೊಂದಕ್ಕೇ ಇದರಿಂದ ರು. 500-600 ಕೋಟಿ ಕಾಮಗಾರಿ ಇಲ್ಲವಾಗಿದೆ ಎಂದರು.
ಅವಕಾಶ ಸಿಗಲಿಲ್ಲ: ಸಂಸತ್ತಿನಲ್ಲಿ ಹೆಚ್ಚು ಮಾತನಾಡಲು ಅವಕಾಶ ಸಿಗಲೇ ಇಲ್ಲ. ತೆಲಂಗಾಣ ಸೇರಿದಂತೆ ಹಲವು ವಿವಾದಗಳು ಸಮಯವನ್ನು ನುಂಗಿ ಹಾಕಿದವು ಎಂದವರು ಹೇಳಿದರು.
ಅಡಕೆ ಬೆಳೆಗಾರರ ವಿಷಯವನ್ನು ಎಲ್ಲರ ಪರವಾಗಿ ಅನಂತಕುಮಾರ ಹೆಗಡೆ ಅವರು ಪ್ರಸ್ತಾಪ ಮಾಡಿದರು. ಈ ವಿಷಯವಾಗಿ ಪ್ರಧಾನಿಯವರನ್ನು ಭೇಟಿ ಮಾಡಿದ್ದೆವು. ಅಡಕೆ ನಿಷೇಧವೆಂಬ ಬೀಜವನ್ನು ಯುಪಿಎ ಸರ್ಕಾರ ಬಿತ್ತಿದೆ. ಮುಂದಿನ ದಿನಗಳಲ್ಲಿ ಇದು ಅಪಾಯಕಾರಿಯಾಗಿ ಬೆಳೆಯಲಿದೆ ಎಂದರು.
ಬಗರ್ ಹುಕುಂ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದೆ. ಹಕ್ಕು ಪಡೆಯಲು ಮೂರು ತಲೆಮಾರಿನ ದಾಖಲೆ ಕೊಡಡಬೇಕು ಎಂಬ ಬದಲು ಒಂದು ತಲೆಮಾರು ಎಂದು ತಿದ್ದುಪಡಿ ಮಾಡುವಂತೆ ಒತ್ತಾಯಿಸಿದೆ.
ಈ ರೀತಿ ತಿದ್ದುಪಡಿ ಆದರೆ ಜಿಲ್ಲೆಯ ಮುಳುಗಡೆ ರೈತರಿಗೆ ಅನುಕೂಲವಾಗುತ್ತಿತ್ತು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಮಧುಗೆ ಸವಾಲ್: ಆಯನೂರು ಮಂಜುನಾಥ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಪಡೆಯುವ ಮತಕ್ಕಿಂತ 10 ಸಾವಿರ ಹೆಚ್ಚು ಮತವನ್ನು ಪಡೆಯುತ್ತೇವೆ. ಮಧು ಬಂಗಾರಪ್ಪರಿಗೆ ಇದು ನಮ್ಮ ಸವಾಲು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು, ಮಧು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ವೈಯಕ್ತಿಕವಾಗಿ ಟೀಕಿಸುವುದು ಸರಿ ಅಲ್ಲ. ಅವರು ಸವಾಲು ಹಾಕುವುದೇ ಆದರೆ ಸ್ವೀಕರಿಸಲು ಸಿದ್ಧರಿದ್ದೇವೆ. ಸೊರಬದಲ್ಲಿ ಅವರಿಗಿಂತ ಹೆಚ್ಚು ಲೀಡ್ ಪಡೆಯುತ್ತೇವೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ನಮಗೆ ಎದುರಾಳಿ ಕಾಂಗ್ರೆಸ್ಸೇ ಹೊರತು ಜೆಡಿಎಸ್ ಅಲ್ಲ ಎಂದರು.
ಜವಾಬ್ದಾರಿ ಕೊಡುತ್ತೇವೆ: ಬಿ.ವೈ. ರಾಘವೇಂದ್ರ ಅವರು ಚುನಾವಣೆಯ ದಂಡನಾಯಕರಾಗಿ ಕೆಲಸ ಮಾಡುತ್ತಾರೆ. ಇವರು ಇನ್ನೂ ಯುವಕರು. ಇವರನ್ನು ಸುಮ್ಮನೆ ಕೂರಿಸುವುದಿಲ್ಲ. ಪಕ್ಷ ಖಂಡಿತವಾಗಿಯೂ ಜವಾಬ್ದಾರಿ ಕೊಡುತ್ತದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಚುನಾವಣೆ ಮುಗಿದ ನಂತರ ಅವರಿಗೆ ಕೊಡಬಹುದಾದ ಸ್ಥಾನಮಾನದ ಬಗ್ಗೆ ಯೋಚಿಸುತ್ತೇವೆ ಎಂದರು.
ಕೆ.ಎಸ್. ಈಶ್ವರಪ್ಪ ಅವರೂ ಸಹ ಪ್ರತಿಕ್ರಿಯಿಸಿ, ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರು ಯೋಚಿಸುವುದಿಲ್ಲ. ಪಕ್ಷ ಯೋಚಿಸುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement