ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸರ್ಕಾರಿ ಕಟ್ಟಡಗಳಲ್ಲಿ ಬಿಎಸ್‌ವೈ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿ'

Lingaraj Badiger
Updated On : 27 Feb 2014, 10:28 am

ಶಿವಮೊಗ್ಗ: ಲೋಕಸಭೆ ಚುನಾವಣೆಯ ನಿಯೋಜಿತ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರ ಫ್ಲೆಕ್ಸ್‌ಗಳಲ್ಲಿ ವಿವಿಧ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳ ಫೋಟೋ ಬಳಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತೆರವುಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಕ್ಷಿಣ ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ವಿ.ವಿಶ್ವನಾಥ್ (ಕಾಶಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಾರ್ವಜನಿಕರ ಹಣದಿಂದ ನಿರ್ಮಿಸಿದ ಈ ಕಟ್ಟಡಗಳು, ಕಾಮಗಾರಿಗಳನ್ನು ತಮ್ಮ ಪ್ರಚಾರಕ್ಕೆ ಬಳಸುತ್ತಿರುವುದು ಸರಿ ಅಲ್ಲ. ಸರ್ಕಾರಿ ಕಟ್ಟಡಗಳಾದ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಕ್ರೀಡಾಂಗಣ, ಬಿ.ಎಚ್. ರಸ್ತೆ, ಆಯುರ್ವೇದ ಕಾಲೇಜು ಇತ್ಯಾದಿ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇವುಗಳನ್ನು ಕೂಡಲೇ ತೆರವುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ: ಬಿಜೆಪಿ ಮುಖಂಡರು ತಮ್ಮ ಸ್ವಂತ ಆಸ್ತಿಯಾದ ರಾಯನ್ ಆರ್ಕೆಡ್, ಪೆಸಿಟ್ ಕಾಲೇಜು, ನಾರಾಯಣ ಹೃದಯಾಲಯ ಕಟ್ಟಡ, ಶಿಕಾರಿಪುರದ ಕುಮದ್ವತಿ ಶಿಕ್ಷಣ ಸಂಸ್ಥೆಗಳ ಫೋಟೋಗಳನ್ನು ಫ್ಲೆಕ್ಸ್‌ಗಳಲ್ಲಿ ಬಳಸಿಕೊಂಡು ತಾವು ಹೇಗೆ ಅಭಿವೃದ್ಧಿಗೊಂಡೆವು ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಮಾಡಿದರೆ ನಮ್ಮ ಅಭ್ಯಂತರವಿರುವುದಿಲ್ಲ. ಜನರ ತೆರಿಗೆ ಹಣದಲ್ಲಿ ನಿರ್ಮಾಣವಾದ ಸರ್ಕಾರಿ ಕಟ್ಟಡಗಳ ಫೋಟೋಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಪ್ರತಿಭಟನೆಯಲ್ಲಿ ದೇವೇಂದ್ರಪ್ಪ, ವಿನ್ಸಂಟ್ ರೋಡ್ರಿಗಸ್ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement