ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರೇಕ್ಷಕನ ಅಭಿರುಚಿಗೆ ತಕ್ಕ ಸಿನಿಮಾ ತಯಾರಾಗಲಿ

Mainashree
Updated On : 28 Feb 2014, 1:04 am

ಶಿವಮೊಗ್ಗ: ಚಲನಚಿತ್ರವನ್ನು ಇತ್ತೀಚೆಗೆ ವೀಕ್ಷಿಸುವ ಪರಿಭಾಷೆಯೇ ಬದಲಾಗಿದ್ದು, ಚಿಕ್ಕ ಚಿಕ್ಕ ಚಿತ್ರಮಂದಿರಗಳಲ್ಲಿ ಸದಭಿರುಚಿಯ ಚಿತ್ರ ಪ್ರದರ್ಶಿಸುವ ಮೂಲಕ ಅವುಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಪ್ರತಿಪಾದಿಸಿದರು.
ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜ ಹಾಗೂ ವಾರ್ತಾ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಫೆಬ್ರವರಿ ಚಿತ್ರೋತ್ಸವದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಒಂದು ಕಾಲದಲ್ಲಿ ಚಿತ್ರಮಂದಿರಗಳಿಗಷ್ಟೇ ಸೀಮಿತವಾಗಿದ್ದ ಚಲನಚಿತ್ರ ಇಂದು ಮೊಬೈಲ್‌ಗೆ ಬಂದು ಕುಳಿತಿದೆ. ಹೀಗಾಗಿ ಪ್ರೇಕ್ಷಕ ಚಿತ್ರಮಂದಿರಗಳಿಂದ ಗಾವುದ ದೂರವೇ ಉಳಿಯುವಂತಹ ವಾತಾವರಣ ಸೃಷ್ಟಿಯಾಗಿದೆ. ಈ ಬದಲಾದ ಚಲನಚಿತ್ರ ವೀಕ್ಷಣೆಯ ಪರಿಭಾಷೆಗೆ ತಕ್ಕಂತೆ ಪ್ರೇಕ್ಷಕನಿಗೆ ಚಲನಚಿತ್ರಗಳನ್ನು ತಲುಪಿಸಬೇಕಾದ ಹೊಣೆಗಾರಿಕೆ ಚಿತ್ರರಂಗಕ್ಕೆ ಇದೆ ಎಂದ ಅವರು, ಪ್ರೇಕ್ಷಕನನ್ನು ಪುನಃ ಚಿತ್ರಮಂದಿರದ ಕಡೆಗೆ ಸೆಳೆಯುವ ಸಲುವಾಗಿ ಹೊಸ- ಹೊಸ ಪ್ರಯೋಗಗಳು, ಪ್ರಯತ್ನ ನಡೆಸಬೇಕಿದೆ ಎಂದರು.
ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಚಿಕ್ಕ ಚಿಕ್ಕ ಚಿತ್ರಮಂದಿರಗಳ ಮೂಲಕ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡುವುದರ ಜತೆಗೆ, ಆಯಾ ಚಿತ್ರ ಪ್ರದರ್ಶನದ ನಂತರ ಒಂದು ಸಂವಾದ ನಡೆಸುವುದರ ಮೂಲಕ ಚಿತ್ರವನ್ನು ಹೆಚ್ಚು ಅರ್ಥೈಸಿಕೊಳ್ಳುವ ಪ್ರಯತ್ನವಾಗಬೇಕು. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿಮಂಡಲದಂತಹ ಚಿತ್ರ ಸಮಾಜಗಳನ್ನು ರಾಜ್ಯಾದ್ಯಂತ ಸಂಘಟಿಸಿದೆ ಎಂದರು.
ಸಹಕಾರ ಅಗತ್ಯ: ಶಿವಮೊಗ್ಗ ಬೆಳ್ಳಿಮಂಡಲ ಚಲನಚಿತ್ರ ಅಕಾಡೆಮಿಯ ಆಶಯವನ್ನು ಸಕಾರಾಗೊಳಿಸುವಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಪ್ರಶಂಸಿಸಿದ ಅವರು, ಸರ್ಕಾರ ಹಾಗೂ ಅಕಾಡೆಮಿ ಈ ರೀತಿಯ ಬೆಳ್ಳಿಮಂಡಲಗಳ ಬಲವರ್ಧನೆಗೆ ಸಹಕಾರ ನೀಡಬೇಕು. ಆ ಮೂಲಕ ಚಲನಚಿತ್ರ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಅಧ್ಯಯನದ ವಸ್ತುವಾಗಲಿ: ವಿಶೇಷವಾಗಿ ಚಲನಚಿತ್ರ ಒಂದು ಅಧ್ಯಯನದ ವಸ್ತುವಾಗಬೇಕು ಎಂದು ಆಶಿಸಿದ ಲಿಂಗದೇವರು, ಕೇವಲ ಮನರಂಜನೆ ಅಷ್ಟೇ ಚಲನಚಿತ್ರದ ಉದ್ದೇಶವಲ್ಲ. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣವೂ ಮುಖ್ಯ. ಹೀಗಾಗಿ ವಿಶ್ವದ ಚಲನಚಿತ್ರ ಅಭ್ಯಸಿಸಿ, ಅದರ ಅಂತರಂಗ ಶೋಧಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಲಾಗುತ್ತಿದ್ದು, ಇದು ಜಿಲ್ಲಾ ಕೇಂದ್ರಗಳಿಗೂ ವಿಸ್ತಾರಗೊಳ್ಳಬೇಕು. ಬೆಳ್ಳಿಮಂಡಲಗಳು ಈ ಕುರಿತು ಸಮಷ್ಟಿ ಪ್ರಯತ್ನ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರು ಆರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರಾಗಿ ಪಾಲ್ಗೊಂಡು ಗಮನ ಸೆಳೆದ ಶಿವಮೊಗ್ಗ ಬೆಳ್ಳಿಮಂಡಲ ಸಂಚಾಲಕ ವೈದ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬೆಳ್ಳಿಮಂಡಲದ ಕಾರ್ಯದರ್ಶಿ ಡಾ. ನಾಗಭೂಷಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಚಿತ್ರೋತ್ಸದ ಕೊನೆಯ ಚಿತ್ರವಾಗಿ ಲಿಂಗದೇವರು ನಿರ್ದೇಶನದ, ಯು. ಆರ್. ಅನಂತಮೂರ್ತಿಯವರ ಕಥೆಯಾಧಾರಿತ ಮೌನಿ ಚಿತ್ರ ಪ್ರದರ್ಶನ ಹಾಗೂ ಸಂವಾದ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement