ಮಾ.3ಕ್ಕೆ ಕಾರ್ಖಾನೆ ಎದುರು ಪ್ರತಿಭಟನೆ
ಭದ್ರಾವತಿ: ಎಂಪಿಎಂ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಿ ಐದು ತಿಂಗಳುಗಳೇ ಕಳೆದರೂ ಸರ್ಕಾರಿ ಸ್ವಾಮ್ಯದ ಎಂಪಿಎಂ ಸಕ್ಕರೆ ಕಾರ್ಖಾನೆ ಸರ್ಕಾರ ನಿಗದಿಪಡಿಸಿದ ಪ್ರತಿ ಟನ್ ಕಬ್ಬಿಗೆ 2500 ಗಳಂತೆ ಈ ವರೆಗೂ ಪಾವತಿ ಮಾಡಿಲ್ಲವೆಂದು ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಭದ್ರಾವತಿ ಘಟಕ ಆರೋಪಿಸಿದೆ.
ಕಾರ್ಖಾನೆಯ ಆಡಳಿತ ಮಂಡಳಿಯ ಈ ವಿಳಂಬ ನೀತಿಯನ್ನು ಖಂಡಿಸುವ ಸಲುವಾಗಿ ಮಾ.3ರ ಸೋಮವಾರದಂದು ಕಾರ್ಖಾನೆಯ ಮುಖ್ಯದ್ವಾರದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಪ್ರಸಕ್ತ ಸಾಲಿನ 2014-15ನೇ ಸಾಲಿನ ಬಜೆಟ್ನಲ್ಲಿ ಎಂಪಿಎಂ ಕಾರ್ಖಾನೆಗೆ ಯಾವುದೇ ರೀತಿಯ ಅನುದಾನ ನೀಡಿಲ್ಲ. ಇದನ್ನು ಸಹ ಖಂಡಿಸಲು ರೈತರು ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಸಂಘದ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ, ಜಿಲ್ಲಾ ಸಂಚಾಲಕ ದೇವಕುಮಾರ್ ಕೋರಿದ್ದಾರೆ.