ಮುಗಿದ ಮೊದಲ ಹಂತದ ನಾಡು- ನುಡಿ ಗೀತೆ ಅಭಿಯಾನ
ವಿಶೇಷ ವರದಿ
ಶಿವಮೊಗ್ಗ: ಸರ್ಕಾರಿ ಶಾಲಾ ವಾತಾವರಣದಲ್ಲಿ ಹೊಸತನ ತರುತ್ತಿರುವ ಸರ್ವ ಶಿಕ್ಷಣ ಅಭಿಯಾನ ಇದೀಗ ರಾಜ್ಯದ ಆಯ್ದ ಶಾಲೆಗಳಲ್ಲಿ ನಾಡು- ನುಡಿ ಗೀತೆ ಅಭಿಯಾನ ಆರಂಭಿಸಿದೆ.
ಫೆ. 24ರಿಂದ ರಾಜ್ಯದ 10 ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಅಭಿಯಾನ ಆರಂಭವಾಗಿದ್ದು, 26ರಂದು ಕೊನೆಗೊಂಡಿದೆ. ಎರಡನೇ ಹಂತದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ.
ಏನಿದು ಅಭಿಯಾನ?: ಭಾರತೀಯ ಪರಂಪರೆಯ ಸಂಗೀತ ಕಲೆಗಳ ಸದಭಿರುಚಿ ಮೂಡಿಸುವ ಸಂಬಂಧ ನಾಡು- ನುಡಿ ಗೀತೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದು ಸರ್ವ ಶಿಕ್ಷಣ ಅಭಿಯಾನದ ಹಿರಿಯ ಅಧಿಕಾರಿಗಳ ಮಾತು.
ಶಿವಮೊಗ್ಗ ಜಿಲ್ಲೆಯ ಎರಡು ಶಾಲೆಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಗುರುಪುರದಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಶಾಲೆ ಹಾಗೂ ಭದ್ರಾವತಿಯ ಒಂದು ಸರ್ಕಾರಿ ಶಾಲೆಗಳಲ್ಲಿ ಸಂಗೀತ ಕಲಾವಿದರ ತಂಡ ಸುಮಾರು 400ಕ್ಕೂ ಹೆಚ್ಚು ಮಕ್ಕಳಿಗೆ ಹಾಡು ಕಲಿಸುತ್ತಿದ್ದಾರೆ.
'ಕನ್ನಡಪ್ರಭ' ಮಂಗಳವಾರ ಗುರುಪುರದ ಸರ್ಕಾರಿ ಶಾಲೆಗೆ ಭೇಟಿಕೊಟ್ಟಾಗ ಅಲ್ಲಿನ 150ಕ್ಕೂ ಹೆಚ್ಚು ಮಕ್ಕಳು ಎಚ್.ಎಸ್. ವೆಂಕಟೇಶಮೂರ್ತಿಯವರು ರಚಿಸಿದ ಎಲೆಗಳು ನೂರಾರು... ಹಾಡನ್ನು ಏಕ ಕಂಠದಲ್ಲಿ ಸಂಭ್ರಮದಿಂದ ಹೇಳುತ್ತಿದ್ದರು. ಕಲಾವಿದರಾದ ನಾಗಭೂಷಣ ಉಡುಪ ಹಾಗೂ ಸುನೀಲ್ ಉಡುಪ ಮಾರ್ಗದರ್ಶನ ಮಾಡುತ್ತಿದ್ದರು.
ಶುದ್ಧವಾಗಿ ನಾಡಗೀತೆ ಹಾಡುವುದು ಸೇರಿದಂತೆ ಒಂದು ವಚನ ಮತ್ತು ವಿಶ್ವವಿನೂತನ ಹಾಡನ್ನು ಕಲಿಸಲಾಗುತ್ತಿದೆ.
ಸರ್ವ ಶಿಕ್ಷಣ ಅಭಿಯಾನದ ಬೆಂಗಳೂರು ಕಚೇರಿಯು ಶಾಲೆಗಳಿಗೆ ಸಿಡಿ ಕಳುಹಿಸಿದ್ದು, ಅದರಲ್ಲಿ ಸಂಬಂಧಪಟ್ಟ ಹಾಗೂ ಕರೋಕೆ ಇದೆ. ಈ ಕಾರ್ಯಕ್ರಮದಲ್ಲಿ ವಾದ್ಯ ವೃಂದದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಹಾಡುಗಳನ್ನು ಕಲಿಸಲಾಗುತ್ತದೆ.
ಸಂಗೀತ ಬಗ್ಗೆ ಆಸಕ್ತಿ: ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಮ್ಮನವರು, ಸರ್ವ ಶಿಕ್ಷಣ ಅಭಿಯಾನದ ಪ್ರತಿಭಾ ಕಾರಂಜಿಯು ಸುಪ್ತ ಪ್ರತಿಭೆ ಹೊರತೆ ತರಲು ವೇದಿಕೆ ಕಲ್ಪಿಸಿದರೆ ಗುಣಮಟ್ಟದ ಶಿಕ್ಷಣಕ್ಕಾಗಿ ಕಲಿಕೋತ್ಸವ ನಡೆಯಿತು. ಈಗ ಭಾರತದಲ್ಲಿ ಪಾರಂಪರಿಕ ಸಂಗೀತ ಕಲೆಗಳನ್ನು ಉಳಿಸುವ ಈ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಶಾಲೆಯ ಮಕ್ಕಳು ಬಹಳ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಸಾಕಷ್ಟು ಬದಲಾವಣೆ ಕಂಡುಬಂದಿದೆ. ಸಂಗೀತದ ಬಗೆಗಿನ ಆಸಕ್ತಿಯೂ ಕಂಡಿದೆ ಎಂದರು.
ಕಲಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಶಾಲೆಯ ವಿದ್ಯಾರ್ಥಿಗಳಾದ ಸಾಹಿಲ್ ಹಾಗೂ ಚಂದನ್, ತುಂಬಾ ಚೆನ್ನಾಗಿ ಹಾಡು ಕಲಿಸುತ್ತಿದ್ದಾರೆ. ಖುಷಿ ಆಗ್ತಿದೆ. ಮುಂದೆಯೂ ಅಭ್ಯಾಸ ಮಾಡುತ್ತೇವೆ ಎಂದರು.
ಕನಿಷ್ಠ್ಠ ಜ್ಞಾನ: ಅಭಿಯಾನ ಕುರಿತು ಮಾಹಿತಿ ನೀಡಿದ ಕಲಾವಿದ ನಾಗಭೂಷಣ ಉಡುಪ, ಖಾಸಗಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರಿರುತ್ತಾರೆ. ಅವರು ಮಕ್ಕಳಿಗೆ ಒಂದಷ್ಟು ಹೇಳಿಕೊಡುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಅದರಲ್ಲೂ ನಾಡು ನುಡಿ ಗೀತೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ವ್ಯವಸ್ಥೆ ಇರುವುದಿಲ್ಲ. ಈ ಮಕ್ಕಳಿಗೆ ಸಂಗೀತದ ಸಂಸ್ಕಾರ ಯಾರೂ ಕೊಡಿಸುವುದಿಲ್ಲ. ಕನಿಷ್ಠ ಸ್ವರ ಹೊರಡಿಸಲು ಆಗದೇ ಇದ್ದರೂ ಕನಿಷ್ಠ್ಠ ಜ್ಞಾನ ತಿಳಿಯಲಿ ಎಂಬ ಕಾರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸರ್ವ ಶಿಕ್ಷಣ ಅಭಿಯಾನವು ಕೊಟ್ಟ ಸಿಡಿ ಬಳಸಿಕೊಂಡು ಮಕ್ಕಳಿಗೆ ಹಾಡು ಹೇಳಿಕೊಡಲಾಗುತ್ತಿದೆ. ಜೂನ್ ನಂತರ ಈ ರೀತಿ ಸರ್ಕಾರಿ ಶಾಲೆಯಲ್ಲಿ ಅಭಿಯಾನದ ಮೂಲಕ ಹಾಡು ಕಲಿತ ಮಕ್ಕಳು ಬೆಂಗಳೂರು ಅಥವಾ ಮೈಸೂರಿನಲ್ಲಿ ಒಟ್ಟಾಗಿ ಸೇರಿ 25 ಸಾವಿರ ಸಂಖ್ಯೆಯಲ್ಲಿ ಹಾಡು ಹಾಡುತ್ತಾರೆ. ಈ ಎಲ್ಲಾ ಚಟುವಟಿಕೆಯ ನಂತರ ಪ್ರಕ್ರಿಯೆ ಸ್ವೀಕರಿಸಿ ಕಾರ್ಯಕ್ರಮವನ್ನು ಹಂತ- ಹಂತವಾಗಿ ಮುಂದುವರಿಸುವ ಆಲೋಚನೆ ಇಲಾಖೆ ಮುಂದಿದೆ.
ಫೆ. 24-25-26ರಂದು ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾ. ಚಾಮರಾಜ ನಗರ, ದಾವಣಗೆರೆ, ಕೊಡಗು ಕೋಲಾರ, ಮಂಡ್ಯ, ಮಧುಗಿರಿ ಮೈಸೂರಿನಲ್ಲಿ ಅಭಿಯಾನ ನಡೆದಿದೆ. ಮುಂದಿನ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದೆ.