ಶಂಕರ.. ಶಶಿಧರ.. ಗಂಗಾಧರ.. ಹರ..
ಕ.ಪ್ರ. ವಾರ್ತೆ, ಶಿವಮೊಗ್ಗ, ಫೆ.27
ಗುರುವಾರ ಶಿವಮೊಗ್ಗ ನಗರದಲ್ಲಿ ಶಿವರಾತ್ರಿ ಸಂಭ್ರಮ ಮೇರೆ ಮೀರಿತ್ತು.
ಪ್ರಮುಖ ಶಿವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತಸಾಗರ ಧಾವಿಸಿಬಂದಿತ್ತು. ಇದೇ ಸಂದರ್ಭದಲ್ಲಿ ಶಿವಾಲಯಗಳಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿಶೇಷ ಅಲಂಕಾರ: ಪ್ರಮುಖವಾಗಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ದುರ್ಗಿಗುಡಿ ಘಟಕವು ದುರ್ಗಿಗುಡಿ ವರ್ತಕರು ಹಾಗೂ ಶಾಲಾ ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ನಿರ್ಮಿಸಿದ್ದ 16 ಅಡಿ ಎತ್ತರದ ಬೃಹತ್ ಶಿವಲಿಂಗ ಹಾಗೂ ಅದರೊಳಗೆ ಅಮರನಾಥ ಹಿಮಲಿಂಗ ದರ್ಶನ ವೀಕ್ಷಿಸಲು ಸಾವಿರಾರು ಜನ ಆಗಮಿಸಿದ್ದರು.
ಸಾಮೂಹಿಕ ಬಿಲ್ವಾರ್ಚನೆ: ಅದೇ ರೀತಿಯಾಗಿ ಇಲ್ಲಿನ ಬಿ.ಬಿ. ರಸ್ತೆಯಲ್ಲಿರುವ ಶ್ರೀ ಭವಾನಿಶಂಕರ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗ ದರ್ಶನ, ಲೋಕಕಲ್ಯಾಣಾರ್ಥ ಸಾಮೂಹಿಕ ಬಿಲ್ವಾರ್ಚನೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ 7ರಿಂದ ಆರಂಭವಾದ ಬಿಲ್ವಾರ್ಚನೆಯು ತಡರಾತ್ರಿವರೆಗೆ ನಡೆದೇ ಇತ್ತು. ಜೊತೆಗೆ ರುದ್ರಹೋಮ, ಶತರುದ್ರಾಭಿಷೇಕ ನಡೆದವು. ವಿವಿಧ ಭಜನಾ ಮಂಡಳಿಗಳು ಅಖಂಡ ಭಜನೆಯಲ್ಲಿ ತೊಡಗಿಕೊಂಡರೆ ಸಂಜೆ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಪ್ರಸ್ತುತಗೊಂಡಿತು.
ನಗರದ ಗಾಂಧಿಬಜಾರ್‌ನ ಶ್ರೀ ಕಲ್ಯಾಕಾಪರಮೇಶ್ವರಿ ವಿಶೇಷ ಪೂಜಾ ಕಾರ್ಯಕ್ರಮಗಳು ಎರಡು ತಂಡದಲ್ಲಿ ನಡೆದವು. ಇಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಅಲಂಕಾರದಲ್ಲಿ ವಿಶೇಷ ದರ್ಶನ ಭಕ್ತರ ಗಮನ ಸೆಳೆಯಿತು. ಇದನ್ನು ವೀಕ್ಷಿಸಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.
ಇಲ್ಲಿನ ನಗರ ಭಜನಾ ಪರಿಷತ್ ಶಿವರಾತ್ರಿ ಅಂಗವಾಗಿ ಶರಾವತಿ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಅಖಂಡ ಭಜನೆ ಹಮ್ಮಿಕೊಂಡಿತ್ತು. ವಿವಿಧ ಭಜನಾ ಮಂಡಳಿಗಳು ಪಾಳಿಯ ಆಧಾರದಲ್ಲಿ ಭಜನೆ ನಡೆಸಿಕೊಟ್ಟವು. ಈ ಭಜನೆ 28ರ ಬೆಳಗ್ಗೆ 6ರ ವರೆಗೆ ನಡೆಯಲಿದೆ.
ವಿಶೇಷ ಪೂಜೆ: ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಶಿವರಾತ್ರಿಯಂದು ಅತಿ ಹೆಚ್ಚಿನ ಭಕ್ತರನ್ನು ಆಕರ್ಷಿಸುವ ಹರಕೆರೆ ರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ ನಸುಕಿನಿಂದಲೇ ಭಕ್ತರು ಸಾವಿರ ಸಾವಿರ ಸಂಖ್ಯೆಯಲ್ಲಿ ಭೇಟಿಕೊಟ್ಟರು. ತುಂಗಾ ನದಿಯಲ್ಲಿ ಮಿಂದು ಶಿವಾಲಯದಲ್ಲಿ ಪೂಜೆ ಸಲ್ಲಿಸಿದರು. ದೇವಾಸ್ಥಾನ ಸಮಿತಿಯಿಂದ ರುದ್ರಹೋಮ, ರುದ್ರಾಭಿಷೇಕ, ಭಜನೆ ಕಾರ್ಯಕ್ರಮ ನಡೆದವು.
ಅದೇ ರೀತಿ ಅರಕೆರೆ ಈಶ್ವರ ದೇವಸ್ಥಾನ, ಕೋಟೆ ರಸ್ತೆ ಭೀಮೇಶ್ವರ ದೇವಸ್ಥಾನ, ಗುಡ್ಡೇಮರಡಿ ಮಲ್ಲೇಶ್ವರ ದೇವಸ್ಥಾನ, ಮತ್ತೂರಿನ ಗಣಪತಿಗುಡ್ಡ, ಮಲೆಶಂಕರ, ಗುಳುಗುಳೇ ಶಂಕರ ಶಿವಾಲಯದಲ್ಲಿ ವಿಶೇಷ ಪೂಜೆ ನಡೆದವು.