ಹೊಳೆಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ
ಭದ್ರಾವತಿ: ಮಹಾ ಶಿವರಾತ್ರಿ ಪ್ರಯುಕ್ತ ಭದ್ರಾನದಿಯಲ್ಲಿರುವ ಹೊಳೆಲಿಂಗೇಶ್ವರ ದೇವರಿಗೆ ಅಖಿಲ ಭಾರತ ವೀರಶೈವ ಸೇವಾ ಸಮಿತಿ ವತಿಯಿಂದ ವಿಶೇಷ ಅಲಂಕಾರ, ಪೂಜೆ ಮತ್ತು ರುದ್ರಹೋಮ ಇತ್ಯಾದಿ ಧಾರ್ಮಿಕ ಕ್ರಿಯೆಗಳನ್ನು ಗುರುವಾರ ಏರ್ಪಡಿಸಲಾಗಿತ್ತು.
ಗುರುವಾರ ಬೆಳಗ್ಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ದೃಶ್ಯ ಕಂಡುಬಂದಿತು. ಅನೇಕ ಭಕ್ತರು ಹೋಮಾದಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅಂತಹ ಭಕ್ತರಿಗೆ ವಿಶೇಷ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು.
ಭದ್ರಾನದಿಯಲ್ಲಿ ವಿಶೇಷ ಮಂಟಪದಲ್ಲಿ ಸ್ಥಾಪಿಸಲಾಗಿರುವ ಹೊಳೆಲಿಂಗೇಶ್ವರ, ನಾಗ ಮತ್ತು ಗಣಪತಿ ವಿಗ್ರಹಗಳಿಗೆ ಪುಪ್ಪಾಲಂಕಾರ ಮಾಡಲಾಗಿತ್ತು. ತೀರ್ಥ- ಪ್ರಸಾದ ವಿನಿಯೋಗಕ್ಕೆ ಪ್ರತ್ಯೇಕ ವ್ಯಕ್ತಿಗಳನ್ನು ನಿಯೋಜಿಸಲಾಗಿತ್ತು. ಎಲ್ಲವೂ ವ್ಯವಸ್ಥಿತವಾಗಿದ್ದು ಭಕ್ತರು ನಿರಾಯಾಸವಾಗಿ ದರ್ಶನ ಪಡೆದರು.
ಸರತಿ ಸಾಲಿನಲ್ಲಿ ದರ್ಶನ ಪಡೆದು ಬಸವಳಿದು ಬಂದ ಭಕ್ತರಿಗೆ ನರೇಂದ್ರ ಮೋದಿ ಬ್ರಿಗೇಡ್‌ನವರು ಮಜ್ಜಿಗೆ ವಿತರಿಸಿದರು.
ಸಂಭ್ರಮದ ಮಹಾಶಿವರಾತ್ರಿ
ಸೊರಬ: ತಾಲೂಕಿನ ಎಲ್ಲೆಡೆ ಸಂಭ್ರಮ ಸಡಗರದ ಮಹಾಶಿವರಾತ್ರಿ ಹಬ್ಬ ನಡೆಯಿತು. ಪಟ್ಟಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಉಮಾ ಮಹೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಪ್ರಸಾದ ವಿನಿಯೋಗ ನಡೆಸಲಾಯಿತು.
ದಂಡಾವತಿ ನದಿಯ ತಟದ ಮೇಲೆ ಇರುವ ಚಂದ್ರಮೌಳೀಶ್ವರ ದೇವರಿಗೆ ಗಂಗಾಭಿಷೇಕ, ತಾಲೂಕಿನ ಹಲವು ಐತಿಹಾಸಿಕ ಶಿವದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಉಮಾ ಮಹೇಶ್ವರಿ ಭಾವೆ ಫೌಂಡೇಶನ್ ಗುಡಿಕೇರಿ ಇವರಿಂದ ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರು ಎಂ. ದಿವಾಕರ್ ಡೋಂಗ್ರೆ ಹಾಗೂ ಸಂಗಡಿಗರಿಂದ ಶರಸೇತುಬಂಧ ಎಂಬ ತಾಳಮದ್ದಲೆ ಪ್ರಸಂಗ ಹಾಗೂ ರಾಷ್ಟ್ರೋತ್ಥಾನ ಪ್ರಕಾಶನ, ಸಾಹಿತ್ಯ ಸಿಂಧು ಪ್ರಕಾಶನ, ಇಸ್ಕಾನ್ ಬೆಂಗಳೂರು ಮತ್ತು ರಾಮಕೃಷ್ಣ ಆಶ್ರಮ ಮಂಗಳೂರು, ಬ್ರಹ್ಮಕುಮಾರಿ ಈಶ್ವರ ವಿದ್ಯಾನಿಲಯ ಸೊರಬ, ಸಮಾಜ ಪುಸ್ತಕಾಲಯ ಧಾರವಾಡ ಇವರುಗಳು ರಂಗನಾಥ ದೇವಸ್ಥಾನ ಆವರಣದಲ್ಲಿ ಧಾರ್ಮಿಕ,
ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾಶಿವರಾತ್ರಿ ಸಂದೇಶವನ್ನು ಭಾವೆ ಫೌಂಡೇಶನ್ ವತಿಯಿಂದ ಸಾರಲಾಯಿತು.