ಯುವಜನರು ಹಳ್ಳಿಗರ ಏಳಿಗೆಗೆ ಶ್ರಮಿಸಲಿ
ಕ.ಪ್ರ.ವಾರ್ತೆ , ತ್ಯಾಗರ್ತಿ , ಫೆ. 28
ಯುವ ಜನಾಂಗವು ದೇವಾಲಯಗಳ ಅಭಿವೃದ್ಧಿಯಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡು ಗ್ರಾಮೀಣ ಪ್ರದೇಶಗಳ ಏಳಿಗೆಗೆ ಸಹಕಾರಿಯಗಬೇಕೆಂದು ಎಂದು ಮುರುಘಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಕರೆ ನೀಡಿದರು.
ಸಾಗರ ತಾಲೂಕಿನ ಹೊಸೂರು ಗ್ರಾಮದಲ್ಲಿ ಶ್ರೀಈಶ್ವರ ಬಸವಣ್ಣ ದೇವಸ್ಥಾನದ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಒಳ್ಳೆಯ ಮನಸ್ಸಿನಿಂದ ಸಂಕಲ್ಪ ಮಾಡಿ ಕಾರ್ಯವನ್ನು ಪ್ರಾರಂಭಿಸಿದರೆ ಅದೇ ಒಳ್ಳೆಯ ಮುಹೂರ್ತ. ಶ್ರಮ ಮತ್ತು ಸಾಧನೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ದೇವರೆಂದರೆ ಭಯ ಪಡಬಾರದು. ದೇವರ ಬಗ್ಗೆ ಭಕ್ತಿ ಭಾವನೆಗಳನ್ನು ಬೆಳೆಸಿಕೊಳ್ಳಲು ದೇವಸ್ಥಾನಗಳು ಅತ್ಯವಶ್ಯವಾಗಿರುತ್ತದೆ ಎಂದರು.
ಮೂಲಸೌಕರ್ಯ ಸಿಗಲಿ: ಮಾಜಿ ಶಾಸಕ ಗೋಪಾಲಕೃಷ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನ, ಶಾಲೆಗಳು ಸಮರ್ಪಕವಾಗಿದ್ದರೆ ಊರಿನ ಅಭಿವೃದ್ಧಿಯೊಂದಿಗೆ ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ನೆಮ್ಮದಿ ನೆಲೆಸುತ್ತದೆ. ಕಷ್ಟ ಬಂದಾಗ ಮಾತ್ರ ದೇವರಲ್ಲಿ ಮೊರೆ ಹೋಗದೆ ದಿನ ನಿತ್ಯವೂ ದೇವರಲ್ಲಿ ನಂಬಿಕೆ ಇಡಬೇಕು. ಮೂಢ ನಂಬಿಕೆಗಳಿಗೆ ಮೊರೆ ಹೋಗದೆ ಸ್ವಾಮೀಜಿಗಳ ಮಾರ್ಗದರ್ಶನ ಪಡೆಯಬೇಕು. ಸಮಾಜದ ಬದಲಾವಣೆ ಆಗಬೇಕಾದರೆ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಸಿಗುವಂತಾಗಬೇಕು ಎಂದರು.
ಶಾಸಕ ಮಧು ಬಂಗಾರಪ್ಪ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಹೊನಗೋಡು ರತ್ನಾಕರ, ತಾಲೂಕು ಪಂಚಾಯಿತಿ ಸದಸ್ಯ ಜ್ಯೋತಿ ಮುರಳೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲುಗುಂಡಿ ನಾಗರಾಜ್, ನವೀನ್ಕುಮಾರ್ ಎಚ್.ಎನ್. ಹೊಸೂರು, ಘನಶೀಲ, ಮಡ್ಡಿ ಹಾಲಪ್ಪ ಉಪಸ್ಥಿತರಿದ್ದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ನಾಗರಾಜ್ ಹೊನಗೋಡು ಅಧ್ಯಕ್ಷತೆ ವಹಿಸಿದ್ದರು. ಅಮೂಲ್ಯ ಪ್ರಾರ್ಥಿಸಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡ್ಡಿ ಸತೀಶ್ ನಿರೂಪಿಸಿದರು.