ಯೋಜನೆ ಸಮರ್ಪಕ ಅನುಷ್ಠಾನ ಅಧಿಕಾರಿಗಳ ಕರ್ತವ್ಯ
ಕ.ಪ್ರ.ವಾರ್ತೆ , ಶಿರಾಳಕೊಪ್ಪ , ಫೆ. 28
ಶಿರಾಳಕೊಪ್ಪ ಭಾಗದ ಉಡಗಣಿ- ತಾಳಗುಂದ ಹೋಬಳಿಯ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಕುರಿತು ಕಾರ್ಯಾಗಾರ ನಡೆಸಲಾಯಿತು.
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಧರ್ಮೋಜಿರಾವ್ ಪ್ರಾರಂಭದಲ್ಲಿ ಮಾತನಾಡಿ, ಇದೊಂದು ಸರ್ಕಾರದ ಕಾರ್ಯ. ಸರ್ಕಾರ ಜಾರಿಗೆ ತಂದಂತಹ ಕಾನೂನನ್ನು ಅನುಷ್ಟಾನಕ್ಕೆ ತರುವುದು ಅಧಿಕಾರಿಗಳ ಕೆಲಸ. ಗ್ರಾಮಾಂತರ ಪ್ರದೇಶದಲ್ಲಿ ಇರುವಂತಹ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳನ್ನು ಮಾನ್ಯ ಮಾಡುವ ಕುರಿತು ತಮಗೆ ಮಾಹಿತಿ ಕೊಡಲಾಗುವುದು ಎಂದು ಭಾಗವಹಿಸಿದ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದರು.
ಕಾನೂನು ಕ್ರಮ: ಇದೊಂದು ವಿಶೇಷ ಕಾರ್ಯಾಗಾರ. ಈ ಕಾನೂನು ತಜ್ಞರ ತಂಡ ಚರ್ಚಿಸಿ ನಂತರ ಸರ್ಕಾರ ನೋಟಿಫಿಕೇಷನ್ ಮಾಡಿ ನಂತರ ಕಾನೂನಿಗೆ ತಿದ್ದುಪಡಿ ಮಾಡಿದೆ. ಅಧಿಕಾರಿಗಳು ಅದನ್ನು ಪಾಲಿಸಬೇಕಿದೆ. ತಹಸೀಲ್ದಾರ್ ಕಚೇರಿಯಿಂದ ವಿಷಯಕ್ಕೆ ಸಂಬಂಧಿಸಿದಂತೆ ಭೂಮಿಯ ನಕಾಶೆ ಹಾಗೆಯೇ ಸಂಬಂಧಿಸಿದ ದಾಖಲೆ ಕೊಡುವದಾಗಿದೆ. ಗ್ರಾಮ ಸಮಿತಿ ಏನಾದರೂ ಕಾನೂನು ಬಿಟ್ಟು ತಪ್ಪು ಮಾಡಿದರೆ ನಮ್ಮ ಇಲಾಖೆ ಕಾನೂನು ಕ್ರಮ ಕೈಗೊಳ್ಳುವುದು ಎಂದರು.
ತಿದ್ದುಪಡಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಅರಣ್ಯ ಹಕ್ಕು ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಸಮಿತಿಗೆ ಎಲ್ಲ ಹಕ್ಕುಗಳು ಇರುತ್ತವೆ. ಯಾವುದೇ ಅಧಿಕಾರಿಗಳನ್ನು ಕೇಳುವ ಪ್ರಶ್ನೆ ಇಲ್ಲ.
ಅನುಸೂಚಿತ ಬುಡಕಟ್ಟು ಎಂದರೆ ಕೆಲವು ಪರಿಶಿಷ್ಟ ಜಾತಿ, ಇತರೆ ಪಾರಂಪರಿಕ ಎಂದೆರ ಎಲ್ಲ ಜಾತಿ ಮತ್ತು ಈ ಕಾಯಿದೆ ಅಡಿ ಅರ್ಜಿ ಹಾಕಬಹುದು. ಕಾಡಿನಲ್ಲಿಯೇ ವಾಸಮಾಡಬೇಕು ಎಂದು ಇಲ್ಲ ಎಂದು ಕಾನೂನು ತಿದ್ದುಪಡಿ ಆಗಿದೆ ಎಂದು ತಿಳಿಸಿದರು.
ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಹಾಕಲಾಗಿದ್ದ 80 ಸಾವಿರ ಅರ್ಜಿಗಳು ವಜಾ ಆಗಿವೆ. ಆದರೆ, ಆ ಅರ್ಜಿಗಳನ್ನು ವಜಾ ಮಾಡಲು ಅಧಿಕಾರವಿಲ್ಲ. ತಪ್ಪೇನಾದರು ಇದ್ದಲ್ಲಿ ಸರಿಪಡಿಸಲು ವಾಪಸ್ಸು ಹಾಕಬಹುದು. ಪಿಡಿಒಗಳು ಗ್ರಾಮ ಸಮಿತಿಗಳಿಗೆ ಎಲ್ಲ ಮಾಹಿತಿ ಕೊಡಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವದೇವ, ಶಿರಾಳಕೊಪ್ಪ ಆರ್ಎಫ್ಒ ರಾಘವೇಂದ್ರ, ದೇನ್ಯಾನಾಯಕ್, ಉಪತಹಸೀಲ್ದಾರ ಆನಂದ ಗರಡಿ, ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಹಾಗೂ ಗ್ರಾಪಂ ವ್ಯಾಪ್ತಿಯ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಸದಸ್ಯರು, ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.