ಸಂಗೀತ-ನೃತ್ಯ ಅಕಾಡೆಮಿ ಸದಸ್ಯರಾಗಿ ಅನನ್ಯ
ಸಾಗರ: ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ ತಾಲೂಕಿನ ಬೇದೂರಿನ ಅನನ್ಯ ಭಾರ್ಗವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಾಲೂಕಿನ ಬೇದೂರಿನ ದಿವಂಗತ ಬಿ.ಜಿ. ಸುಬ್ರಾಯ ಭಟ್ ಮತ್ತು ಗೌರಮ್ಮ ದಂಪತಿಗಳ ಪುತ್ರರಾದ ಅನನ್ಯ ಭಾರ್ಗವ್ ಹಿಂದೂಸ್ತಾನಿ ಗಾಯಕರಾಗಿದ್ದಾರೆ. ಜೊತೆಗೆ ಚಲನಚಿತ್ರ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನನ್ಯ ಭಾರ್ಗವ್ ಅವರು 'ಕಣ್ಣುಕಣ್ಣು ಕಲೆತಾಗ' ಹಾಗೂ 'ಲವ್ ಜಂಕ್ಷನ್' ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಸಂಗೀತ ಗುರುವಾಗಿ ಸಹ ಭಾರ್ಗವ್ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಭಾರ್ಗವ್ ಶ್ರೀಸುರ್ ತಾಲ್ ಸಂಗೀತ ಮ್ಯೂಸಿಕ್ ಎಂಡ್ ಆರ್ಟ್ ಅಕಾಡೆಮಿ ಸ್ಥಾಪಿಸಿ, ಅದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತಿದ್ದಾರೆ.
ಅಭಿನಂದನೆ: ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಅನನ್ಯ ಭಾರ್ಗವ್ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ರಘುಪತಿ ರಾವ್ ಮತ್ತಿಕೊಪ್ಪ, ಕುಂಟುಗೋಡು ಸೀತಾರಾಂ, ಅಶ್ವಿನಿಕುಮಾರ್, ಎಲ್.ವಿ. ಅಕ್ಷರ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ.