ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಏ.1ರಿಂದ ರೂಪೇ ಕಾರ್ಡ್ ಜಾರಿ

Lingaraj Badiger
Updated On : 2 Jan 2014, 11:10 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.1
ಏಪ್ರಿಲ್ 1ರಿಂದ ಜಿಲ್ಲೆಯ 162 ಪ್ರಾಥಮಿಕ ಸಹಕಾರ ಸಂಘಗಳನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ತಂತ್ರಾಂಶವನ್ನು ಡಿಸಿಸಿ ಬ್ಯಾಂಕ್ ಸಿದ್ಧಪಡಿಸಿ ನೀಡಲಿದೆ ಎಂದು ರಾಜ್ಯ ಆಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ನಬಾರ್ಡ್ ಆಶ್ರಯದಲ್ಲಿ ಬುಧವಾರ ಜಿಲ್ಲಾ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ರೂಪೇ ಕಾರ್ಡ್ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ರೂಪೇ ಕಾರ್ಡ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಏ.1ರಿಂದ ಸಹಕಾರ ಸಂಘಗಳಲ್ಲಿ ಚೆಕ್ ವ್ಯವಹಾರದ ಬದಲಾಗಿ ರೂಪೇ ಕಾರ್ಡ್ ಮೂಲಕ ವ್ಯವಹಾರ ನಡೆಯಲಿದೆ. ಮಾತ್ರವಲ್ಲ. ಸರ್ಕಾರದ ಎಲ್ಲಾ ಸಹಾಯಧನಗಳು ಸದಸ್ಯರ ಅಕೌಂಟ್‌ಗೆ ಸಂದಾಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಸಂಘ ಬ್ಯಾಂಕ್‌ಗಳಲ್ಲಿ ಫೆಬ್ರವರಿ ಅಂತ್ಯಕ್ಕೆ ಕೋರ್ ಬ್ಯಾಂಕಿಂಗ್ ಸಿಸ್ಟ್‌ಂ ಅಳವಡಿಸಲಾಗುವುದು. ಈ ಬಗ್ಗೆ ಮಾರ್ಚ್ ಒಳಗೆ ಎಲ್ಲಾ ಸಹಕಾರ ಸಂಘಗಳ ಸಿಬ್ಬಂದಿ ತರಬೇತಿ ಪಡೆದುಕೊಳ್ಳಬೇಕು ಎಂದ ಅವರು, ಸಂಘಗಳ ಎಲ್ಲಾ ಸಿಇಒಗಳು ಕಂಪ್ಯೂಟರ್ ತರಬೇತಿ ಪಡೆದುಕೊಳ್ಳಬೇಕು. ಸಹಕಾರಿ ಸಂಘಗಳ ಎಲ್ಲಾ ಸದಸ್ಯ ರೈತರ ಸಂಪೂರ್ಣ ಮಾಹಿತಿ ಸಂಗ್ರಹಣೆ ಮಾಡಿ, ರೈತರ ಸಾಲ, ದೊಡ್ಡ, ಸಣ್ಣ ರೈತರು ಹೊಂದಿರುವ ಭೂಮಿ, ಬೆಳೆಯ ವಿವರ ಹಾಗೂ ಎಷ್ಟು ಜನ ಪರಿಶಿಷ್ಟ ಪಂಗಡ, ಜಾತಿಯವರು ಇದ್ದಾರೆ. ಮಹಿಳೆಯರು ಎಷ್ಟಿದ್ದಾರೆ. ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯನ್ನು ದಾಖಲಿಸಬೇಕು. ಈ ಮೂಲಕ ಆರ್ಥಿಕ ಸಾಕ್ಷರತೆಯನ್ನು ಪ್ರತಿ ರೈತರು ಮತ್ತು ಕೃಷಿ ಕಾರ್ಮಿಕರಿಗೆ ನೀಡಲಾಗುವುದು ಎಂದು ತಿಳಿಸಿದರು.
ಹೊಸವರ್ಷಕ್ಕೆ ಹೊಸ ಯೋಜನೆ ರೂಪಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಎಲ್ಲರೂ ಸಹಕಾರಿ ಕ್ಷೇತ್ರದ ಸದಸ್ಯತ್ವ ಹೊಂದಲು ಕ್ರಮಕೈಗೊಳ್ಳಲಾಗುವುದು. ಸದಸ್ಯತ್ವದ ಹಣ ಕಟ್ಟಲು ಸಾಧ್ಯವಾಗದಿರುವವರಿಗೆ ಹೊಸ ಯೋಜನೆ ರೂಪಿಸಲಾಗಿದ್ದು, ಪ್ರಾಥಮಿಕ ಸಹಕಾರ ಸಂಘಗಳು ಕಾರ್ಪೋರೇಟ್ ಸೆಕ್ಟರ್‌ಗೆ ಕಡಿಮೆ ಇಲ್ಲವಂತೆ ಪ್ರಬಲವಾಗಬೇಕು. ಮಲ್ಟಿ ಸರ್ವೀಸ್ ಸೆಂಟರ್ ಆರಂಭಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ತರಬೇತಿಯನ್ನು ಪಡೆದುಕೊಳ್ಳಬೇಕು. ಈ ಸಂಬಂಧವಾಗಿ ಜ.15ರ ನಂತರ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಸರ್ಕಾರ ಬಡ್ಡಿ ರಹಿತ ಸಾಲ ನೀಡಿದ ನಂತರ ಸಾಲ ಪಡೆಯುವವರ ಸದಸ್ಯತ್ವ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ 2012ರ ಡಿ. ಅಂತ್ಯಕ್ಕೆ 6,448 ಕೋಟಿ ಸಾಲವನ್ನು 17,70 ಲಕ್ಷ ರೈತರಿಗೆ ನೀಡಿದೆ. 2013ರ ಡಿಸೆಂಬರ್ ಅಂತ್ಯಕ್ಕೆ 21.72 ಲಕ್ಷ ರೈತರಿಗೆ 7,550 ಕೋಟಿ ಸಾಲ ನೀಡಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ನಬಾರ್ಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ರಾಘವೇಂದ್ರ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎನ್.ಟಿ.ನಾಗಭೂಷಣ, ಸಹಕಾರ ಸಂಘಗಳ ಉಪನಿಬಂಧಕ ಸಂತೋಷ್‌ಕುಮಾರ್, ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕ ದುಗ್ಗಪ್ಪಗೌಡ, ಜಯಪ್ರಕಾಶ್, ತಿಮ್ಮಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement