ಜ್ಞಾನಪೀಠ ಪ್ರಶಸ್ತಿಗೆ ಮಹತ್ವ ಬೇಡ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.1
ಮಡಿಕೇರಿಯಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ ನಾ. ಡಿಸೋಜ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆತ್ಮೀಯವಾಗಿ ಸನ್ಮಾನಿಸಿತು.
ಬುಧವಾರ ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾ.ಡಿ. ಅವರಿಗೆ ನಾಡಿನ ಗೌರವ ಕಾರ್ಯಕ್ರಮದಲ್ಲಿ ನಾ. ಡಿಸೋಜ ದಂಪತಿಯನ್ನು ಗೌರವಿಸಲಾಯಿತು.
ಖಾಸಗಿ ಪ್ರಶಸ್ತಿ: ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪಡೆದವರ ಫೋಟೋಗಳನ್ನು ಶಾಲೆಗಳಲ್ಲಿ ಹಾಕಿಕೊಂಡು ಮೆರೆಸುತ್ತಿದ್ದಾರೆ. ಅದೇನೂ ದೊಡ್ಡ ಪ್ರಶಸ್ತಿಯಲ್ಲ. ಖಾಸಗಿ ಸಂಸ್ಥೆ ಕೊಡುವಂತಹ ಪ್ರಶಸ್ತಿ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಡಿಸೋಜ ಅವರು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಲ್ಲಿ ಅಥವಾ ತಮ್ಮ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿಸಿದ್ದಲ್ಲಿ ಇಷ್ಟೊತ್ತಿಗೆ ಜ್ಞಾನಪೀಠ ಲಭ್ಯವಾಗಿರುತ್ತಿತ್ತು. ಇಂಗ್ಲಿಷ್ ಭಾಷೆಗೆ ಅನುವಾದ ಸಾಹಿತ್ಯಗಳ ಸಾಹಿತಿಗಳಿಗೆ ಮಾತ್ರ ಜ್ಞಾನಪೀಠ ಬರುತ್ತದೆ. ಅದಕ್ಕಾಗಿ ಅನುವಾದಕರ ಗುಂಪೇ ಇದೆ. ಇಂತಹ ಪ್ರಶಸ್ತಿಗಳಿಗಿಂತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದೇ ದೊಡ್ಡ ಪ್ರಶಸ್ತಿ. ಇದಕ್ಕಿಂತ ಮತ್ತೊಂದು ಪ್ರಶಸ್ತಿ ಬೇರೆ ಯಾರು ನೀಡಲು ಸಾಧ್ಯವಿಲ್ಲ ಎಂದರು.
ಕಎರಡು ಪ್ರಕಾರ: ಕನ್ನದಲ್ಲಿ ಜನಪ್ರಿಯ ಮತ್ತು ಗಂಭೀರ ಸಾಹಿತ್ಯವೆಂಬ ಎರಡು ಪ್ರಕಾರಗಳಿವೆ. ನಾ. ಡಿಸೋಜ ಜನಪ್ರಿಯ ಸಾಹಿತ್ಯ ಪ್ರಕಾರಕ್ಕೆ ಸೇರಿದವರು. ಜನರಿಂದ ವಿಮುಖಗೊಂಡ ಗಂಭೀರ ಸಾಹಿತಿಗಳು ಜನಪ್ರಿಯ ಸಾಹಿತಿಗಳನ್ನು ನಿರ್ಲಕ್ಷ್ಯದಿಂದ ನೋಡುತ್ತಾರೆ. ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅಂತಹ ವ್ಯಕ್ತಿಗಳಿಂದ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಜನಪ್ರಿಯ ಸಾಹಿತ್ಯ ಎಂದಿಗೂ ಜನಪರವಾಗಿರುತ್ತದೆ. ಜನರನ್ನು ಬಹಳ ಬೇಗ ತಲುಪುತ್ತದೆ. ಆದರೆ, ಗಂಭೀರ ಸಾಹಿತ್ಯ ವಿಮರ್ಶಕರನ್ನು ಮೆಚ್ಚಿಸುತ್ತವಷ್ಟೆ. ಅದಕ್ಕಾಗಿಯೇ ಅವರು ತಮ್ಮದೇ ಆದ ವಿಮರ್ಶಕರ ವಲಯವನ್ನು ಸೃಷ್ಟಿಸಿಕೊಂಡಿರುತ್ತಾರೆ. ಇದು ಬಹಳ ಅಪಾಯಕಾರಿಯಾಗಿದೆ. ಅಲ್ಲದೇ ಈ ರೀತಿ ಬರೆಯುವಂತಹ ಲೇಖಕರು ಸರ್ಕಾರಿ ಸಂಬಳ ಪಡೆದು ಬರೆಯುತ್ತಾರೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಸಾಮಾನ್ಯ ಸಂಗತಿ ತಿಳಿದಿಲ್ಲ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನದ ಮಾರನೇ ದಿನ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರಕವಿಗೆ ಒಂದು ನಿಮಿಷಗಳ ಕಾಲ ಶ್ರದ್ಧಾಂಜಲಿ ಅರ್ಪಿಸಬೇಕು ಎಂಬ ಸಾಮಾನ್ಯ ಸಂಗತಿಯೂ ಸರ್ಕಾರಕ್ಕೆ ಇಲ್ಲದಿರುವುದು ದುರಂತ. ಸರ್ಕಾರದ ಜನಪ್ರತಿನಿಧಿಗಳು ರಾಷ್ಟ್ರಕವಿ ಎಂದು ಉತ್ಸವ ಮೂರ್ತಿಯಂತೆ ಮೆರೆಸುತ್ತಾರೆ ಹೊರತು ನಿಜವಾದ ಕಾಳಜಿ ಇಲ್ಲ ಎಂದು ದೂರಿದರು.
ಅಕಾಡೆಮಿಕ್ ಹಿನ್ನೆಲೆ ಇಲ್ಲದವರು ಸಮ್ಮೇಳನಾಧ್ಯಕ್ಷರಾಗಿರುವುದು ಬಹಳ ಕಡಿಮೆ. ಡಿಸೋಜ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತನಾಗಿದ್ದುಕೊಂಡು ಇಲ್ಲಿಯವರೆಗೆ ಬೆಳೆದಿರುವುದು ಶ್ಲಾಘನೀಯ. ಸಾಹಿತ್ಯ ಮನುಷ್ಯನ ನೈತಿಕ ಸಾಮರ್ಥ್ಯವನ್ನು ಕಾಪಾಡುವಂತಹ ಶಕ್ತಿ ಹೊಂದಿದೆ ಎಂದರು.
ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಸಮಾಜವಾದಿ ಮುಖಂಡ ಕೋಣಂದೂರು ಲಿಂಗಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು, ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರೈತ ಮುಖಂಡ ಕೆ.ಟಿ. ಗಂಗಾಧರ್, ತಾಲುಕು ಕಸಪಾ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
'ನನ್ನ ಸಾಹಿತ್ಯ ಪ್ರೀತಿ ಜನರು ಕೊಟ್ಟ ಪ್ರೋತ್ಸಾಹ'
ಶಿವಮೊಗ್ಗ: ಒಬ್ಬ ಸಾಹಿತಿಗೆ ನಿಜವಾದ ಸಂತೋಷ ಆಗುವುದು ಓದುಗನನ್ನು ಪುಸ್ತಕಗಳು ತಲುಪಿದಾಗ ಎಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ನಾ. ಡಿಸೋಜ ಹೇಳಿದರು.
ಸನ್ಮಾನ ಸ್ವೀಕರಿಸಿದ ಅವರು, ನಾನು ಕನ್ನಡದಲ್ಲಿ ಏನಾದರೂ ಬರೆದಿದ್ದೇನೆ ಎಂದರೆ ಅದಕ್ಕೆ ಕಾರಣ ಜಿಲ್ಲೆಯ ಜನರು ಕೊಟ್ಟ ಪ್ರೋತ್ಸಾಹ ಎಂದರು.
ಪತ್ರಿಕೆಗಳಿಗೆ ಬರೆಯುವ ಲೇಖಕರನ್ನು ಬುದ್ಧಿವಂತ ಲೇಖಕರು ಅನುಮಾನದಿಂದ ನೋಡುತ್ತಾರೆ. ಜನರ ಪರವಾಗಿ ಬರೆಯುವ ಕಾರಣಕ್ಕೇ ಟೀಕೆ ಮಾಡುತ್ತಾರೆ. ಆದರೆ ನಿಜವಾಗಿ ನಾನು ಕಲಿತಿರುವುದು ಪತ್ರಿಕೆಗಳಿಂದ. ಇವುಗಳಲ್ಲಿ ಬರೆಯುವ ಮೂಲಕ. ಇದಕ್ಕೆ ನಾನು ಕೃತಜ್ಞ ಎಂದರು. ಪತ್ರಿಕಾ ಕ್ಷೇತ್ರದಲ್ಲಿರುವವರಿಗೆ ಸಾಹಿತ್ಯ ಕ್ಷೇತ್ರದ ಅಭಿರುಚಿ ಇದೆ. ನಾನು ಪತ್ರಿಕಾ ಬರಹಗಾರನಾಗಿ ಬೆಳೆದಿದ್ದೇನೆ ಎಂದು ಹೇಳಿದರು.