ನಿಷೇಧಿತ ಪ್ರದೇಶದಲ್ಲಿ ಮರಳು ಸಾಗಣೆ
ಹೊಸನಗರ: ಲೋಕೋಪಯೋಗಿ ಇಲಾಖೆಯ ಆದೇಶದ ಅನ್ವಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಜಾಕ್ವೆಲ್ ಸುತ್ತ ಮುತ್ತಲಿನ 250 ಮೀಟರ್ ಸ್ಥಳದಲ್ಲಿ ಮರಳು ಗಣಿಗಾರಿಕೆ ನೀಷೇಧಿಸಿದ್ದರೂ ಮರಳು ಲೂಟಿಕೋರರು ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ ಎಂದು ತ್ರಿಣಿವೆ ಗ್ರಾಪಂ ಹೊಸನಗರ ಪೋಲಿಸರಿಗೆ ದೂರು ನೀಡಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.
ತ್ರಿಣಿವೆ ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರು ಸರಬರಾಜು ಯೋಜನೆಯ ಜಾಕ್ವೆಲ್ ಇರುವ ಶರಾವತಿ ನದಿ ಪಕ್ಕದ 250 ಮೀಟರ್ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕುಡಿಯುವ ನೀರು ಸುವ್ಯವಸ್ಥೆ ಸಲುವಾಗಿ 250 ಮೀಟರ್ ಪ್ರದೇಶದಲ್ಲಿ ಮರಳು ಸಾಗಣೆ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಗುರುತಿಸಲಾಗಿದ್ದು ಮರಳು ನಿಷೇದಿಸಿ ನಾಮಫಲಕ ಅಳವಡಿಸಲಾಗಿದೆ. ಆದಾಗ್ಯೂ ಮರಳು ದಂಧೆಕೋರರು ನಿರ್ಬಂಧಿತ ಪ್ರದೇಶವನ್ನು ಅತಿಕ್ರಮಿಸಿ ಮರಳು ಲೂಟಿ ಮಾಡುತ್ತಿದ್ದಾರೆ. ಗ್ರಾಪಂ ಸದಸ್ಯರು ಪ್ರಶ್ನಿಸಿದರೆ ಅವರನ್ನು ಕ್ಯಾರೆ ಅನ್ನದೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಮೌನ: ಇಲ್ಲಿನ ಶರಾವತಿ ನದಿಯ ಇಕ್ಕೆಲಗಳಲ್ಲೂ ಅಕ್ರಮ, ಕಾನೂನು ಬಾಹಿರ ಮರಳು ಸಾಗಣೆ, ದಾಸ್ತಾನು ನಡೆಯುತ್ತಲೇ ಇದ್ದರೂ ಯಾವೊಬ್ಬ ಅಧಿಕಾರಿ ಇದರತ್ತ ಗಮನ ನೀಡದೆ ಮರಳು ಖದೀಮರ ಅಕ್ರಮಕ್ಕೆ ಸಾಥ್ ನೀಡುತ್ತಿದ್ದು, ಅಕ್ರಮ ಮರಳು ಮಾಫಿಯಾ ನೆಲೆಯೂರಲು ಕಾರಣವಾಗಿದೆ. ಮರಳು ಸಾಗಣೆಯಿಂದ ಬೇಸತ್ತ ನಾಗರಿಕರು ಅನೇಕ ಬಾರಿ ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಬಿಟ್ಟರೆ ಕಠಿಣಕ್ರಮ ಕೈಗೊಳ್ಳದೆ ಮೃದುಧೋರಣೆ ತಾಳಿ ದಂಗೆಕೋರರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದಂತಾಗಿದೆ. ಇದರ ಮಧ್ಯೆ ಕೆಲ ಸ್ಥಳೀಯರ ಚಿತಾವಣೆ ಮತ್ತು ಹಣದಾಸೆಯಿಂದ ಅಕ್ರಮ ಯಾವುದೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ದೂರಲಾಗಿದೆ
ಒಂದೇ ಮೂಲ: ತ್ರಿಣಿವೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಈ ಸ್ಥಳವೊಂದೇ ನೀರಿನ ಮೂಲವಾಗಿದೆ. ಕಳೆದ ವರ್ಷ ಜಾಕ್ವೆಲ್ ಪಕ್ಕ ಭಾರಿ ಕಂದಕ ನಿರ್ಮಿಸಿ ಮರಳು ಗಣಿಗಾರಿಕೆ ಮಾಡಿದ್ದರ ಫಲವಾಗಿ ವರ್ಷ ಪೂರ್ತಿ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬಂದಿತ್ತು. ಈ ಬಗ್ಗೆ ಗ್ರಾ.ಪಂ ಸೂಕ್ತ ತೀರ್ಮಾನ ಕೈಗೊಂಡು ನಿರ್ಬಂಧಿತ ಪ್ರದೇಶವೆಂದು ಗಡಿ ಗುರುತಿಸಿಲಾಗಿದೆ.
ಗ್ರಾಪಂ ನಿರ್ಬಂಧಿತ ಸ್ಥಳದಲ್ಲಿ ಮರಳು ಸಾಗಣೆ ಶಿಕ್ಷಾರ್ಹ ಅಪರಾಧವಾಗಿದ್ದರೂ ಮರಳು ಕಳ್ಳರು ಯಾವುದೇ ಭಯವಿಲ್ಲದೆ ರಾಜರೋಷವಾಗಿ ಮರಳು ಸಾಗಣೆಯಲ್ಲಿ ತಲ್ಲಿನರಾಗಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಗ್ರಾಮಸ್ಥರ ಉಗ್ರ ಪ್ರತಿಭಟನೆ ಎದುರಿಸಬೇಕಾದಿತು ಎಂದು ಎಚ್ಚರಿಸಿದೆ.