ಎಂಪಿಎಂ ಉದ್ಯೋಗಿ ಕೊಲೆ: ದೂರು
ಭದ್ರಾವತಿ: ರಸ್ತೆ ಅಪಘಾತದಲ್ಲಿ ಮೃತಪಟ್ಟವನ ಮನೆಯವರಿಗೆ ವಿಷಯ ಮುಟ್ಟಿಸಲು ಪೊಲೀಸರು ಯತ್ನಿಸಿದಾಗ ಅದು ಅಪಘಾತವಲ್ಲ ಕೊಲೆ ಎಂಬ ಶಂಕೆ ಹಿನ್ನೆಲೆ ಬುಧವಾರ ಕಾಗದ ನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಬೆಳಗಿನ ಜಾವ ಪಟ್ಟಣದ ಹೊರವಲಯದ ಉಜ್ಜಿನೀಪುರ ಬೈಪಾಸ್ ರಸ್ತೆ ಬದಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಮರಿಗೌಡ (55) ಅವರ ಶವವನ್ನು ಕಂಡು ನಾಗರಿಕರು ಅದೊಂದು ರಸ್ತೆ ಅಪಘಾತ ಪ್ರಕರಣ ಎಂದು ಭಾವಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸಬ್‌ಇನ್‌ಸ್ಪೆಕ್ಟರ್ ನಾಗಮ್ಮ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಮನೆಯೊಳಗೆ ರಕ್ತದ ಕಲೆಗಳು ಕಂಡುಬಂದಿದ್ದು, ಮರಿಗೌಡರನ್ನು ದುಷ್ಕರ್ಮಿಗಳು ಕೊಲೆ ಮಾಡಿ ನಂತರ ಶವವನ್ನು ಬೈಪಾಸ್ ಬಳಿ ತಂದು ಎಸೆದಿರಬಹುದು ಎಂದು ಶಂಕಿಸಿದ್ದಾರೆ.