ದೇಹದಾರ್ಢ್ಯ ಸ್ಪರ್ಧೆ: ರಾಷ್ಟ್ರಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ: ಕಮ್ಮರಡಿಯ ಶ್ರೀವನದುರ್ಗ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿರುವ ಎಲ್.ಡಿ.ಜಗದೀಶ್ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಬಾಡಿ ಬಿಲ್ಡರ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಮೆಸ್ಕಾಂ ಕೊಪ್ಪ ವಿಭಾಗದ ಕಮ್ಮರಡಿ ಲೈನ್‌ಮೇನ್ ಆಗಿರುವ ಜಗದೀಶ್ ಸ್ಪರ್ಧೆಯಲ್ಲಿ ಮೆಸ್ಕಾಂ ಪ್ರತಿನಿಧಿಸಿದ್ದರು. ಕಳೆದ ಬಾರಿ ಸಹ ಮೆಸ್ಕಾಂನಿಂದ ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ನಾಳೆಯಿಂದ ಸಂಗೀತ ಶಾಸ್ತ್ರಜ್ಞರ ಗೋಷ್ಠಿ
ಸಾಗರ: ತಾಲೂಕಿನ ವರದಹಳ್ಳಿಯ ಶ್ರೀ ಶ್ರೀಧರ ಸೇವಾಶ್ರಮದ ಸಹಯೋಗದೊಂದಿಗೆ ಮೈಸೂರು ಜಿಲ್ಲೆ ಕೃಷ್ಣರಾಜ ನಗರದ ವೇದಾಂತ ಭಾರತಿ ಸಂಸ್ಥೆ ವತಿಯಿಂದ ಜ.4 ಮತ್ತು 5ರಂದು ವರದಹಳ್ಳಿಯಲ್ಲಿ ಶಾಂಕರ ಗೀತಾ ಸೌರಭ ಎನ್ನುವ ಸಂಗೀತ ಶಾಸ್ತ್ರಜ್ಞರ ಗೋಷ್ಠಿ ಏರ್ಪಡಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿಮಠದ ಶ್ರೀ ಶಂಕರ ಭಾರತಿ ಸ್ವಾಮಿಗಳು ವಹಿಸಲಿದ್ದಾರೆ. ಹಿಂದೂಸ್ತಾನಿ ವಿದ್ವಾಂಸ ಹಾಸಣಗಿ ಗಣಪತಿ ಭಟ್ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಶ್ರೀ ಶಂಕರಾಚಾರ್ಯರ ಸ್ತ್ರೋತ್ರ ಸಾಹಿತ್ಯವನ್ನು ಸಂಗೀತದ ಮೂಲಕ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಗೋಷ್ಠಿಗಳು ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬೇಕೆಂದು ವೇದಾಂತ ಭಾರತಿ ಸಂಸ್ಥೆಯ ಡಾ. ಶ್ರೀಧರ ಭಟ್ ಐನಕೈ ತಿಳಿಸಿದ್ದಾರೆ.