ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರೋತ್ಥಾನ ಯೋಜನೆ ಅಡಿ ನಗರಕ್ಕೆ 100 ಕೋಟಿ

Lingaraj Badiger
Updated On : 3 Jan 2014, 10:54 am

ಕ.ಪ್ರ. ವಾರ್ತೆ, ಶಿವಮೊಗ್ಗ, ಜ.2
ಶಿವಮೊಗ್ಗ ನಗರಸಭೆಯು ಪಾಲಿಕೆಯಾಗುವುದರ ಜತೆಗೆ ಅನುದಾನದ ಮಹಾಪೂರವನ್ನೇ ಹರಿಸಿದೆ. ಇನ್ನೊಂದು ವರ್ಷದಲ್ಲಿ ನಗರದ ಚಿತ್ರಣವೇ ಬದಲಾಗುವಷ್ಟು ಯೋಜನೆಗಳು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಚಿಂತನೆಯಲ್ಲಿವೆ.
ಹೊಸ ವರ್ಷವನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ವಿಶೇಷ ಕಾಮಗಾರಿಗಳನ್ನು ಘೋಷಿಸುವುದರ ಮೂಲಕ ಆರಂಭಿಸಿದ್ದಾರೆ.
ರಸ್ತೆ ಅಭಿವೃದ್ಧಿ, ಸಂಚಾರ ಸುವ್ಯವಸ್ಥೆ, ನಿರಂತರ ಕುಡಿಯುವ ನೀರು, ಸೈಕಲ್ ಮಾರ್ಗ, ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ರಸ್ತೆಗಳ ಅಗಲೀಕರಣ, ಸಿಗ್ನಲ್ ರಹಿತ ವೃತ್ತಗಳ ನಿರ್ಮಾಣ ಸೇರಿದಂತೆ ಹಲವು ವಿನೂತನ ಯೋಜನೆಗಳನ್ನು ಅವರು ಸಿದ್ಧಪಡಿಸಿದ್ದಾರೆ.
ಯೋಜನೆಗಳ ವಿವರ ನೀಡಿರುವ ಅವರು, ನಗರೋತ್ಥಾನ ಯೋಜನೆ ಅಡಿ ನಗರಕ್ಕೆ 100 ಕೋಟಿ ಅನುದಾನ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
ನಗರವು ದಿನೇ ದಿನೇ ಬೆಳೆಯುತ್ತಿದ್ದು, ಸಂಚಾರ ಸುಗಮಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಪಾದಚಾರಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಮೆಗ್ಗಾನ್ ಆಸ್ಪತ್ರೆ ಎದುರು, ನಗರಸಭೆ ಎದುರು, ಸಾಗರ ರಸ್ತೆ ಹಾಗೂ ಮಿಳಘಟ್ಟ 80 ಅಡಿ ರಸ್ತೆಯಲ್ಲಿ 425 ಲಕ್ಷ ವೆಚ್ಚದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು.
ಸೈಕಲ್ ಸವಾರರನ್ನು ಉತ್ತೇಜಿಸಲು ಸಾಗರ ರಸ್ತೆಯಲ್ಲಿ 80 ಲಕ್ಷ ವೆಚ್ಚದಲ್ಲಿ ಸೈಕಟ್ ಟ್ರ್ಯಾಕ್ ನಿರ್ಮಿಸಲಾಗುವುದು. ಮಿಳಘಟ್ಟ ಹಾಗೂ ಗೋಪಾಳದಲ್ಲಿ ರಸ್ತೆ ಅಗಲೀಕರಿಸಿ ವಿಸ್ತರಿಸಲು 400 ಲಕ್ಷ ಕಾದಿರಿಸಲಾಗಿದೆ. ನೇತಾಜಿ ವೃತ್ತದಿಂದ ದ್ರೌಪದಮ್ಮ ವೃತ್ತದವರೆಗೆ ದ್ವಿಪಥ ರಸ್ತೆಗೆ 84 ಲಕ್ಷ ಇಡಲಾಗಿದೆ ಎಂದರು.
ಪಾರ್ಕಿಂಗ್ ವ್ಯವಸ್ಥೆ: ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅಭಿವೃದ್ಧಿಪಡಿಸಲು 150 ಲಕ್ಷ, ಪಾರ್ಕ್ ಬಡಾವಣೆ ವಾತ್ಸಲ್ಯ ಆಸ್ಪತ್ರೆ ಪಕ್ಕದ ಕನ್ಸರ್ವೆನ್ಸಿ ಅಭಿವೃದ್ಧಿಪಡಿಸಲು 40 ಲಕ್ಷ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಬಸ್ ನಿಲ್ದಾಣ ಎದುರಿನ ಅಶೋಕ ರಸ್ತೆಯಲ್ಲಿ ಲಿಫ್ಟ್ ಸೌಕರ್ಯವುಳ್ಳ ಮೇಲುಸೇತುವೆ ಪಾದಚಾರಿ ಮಾರ್ಗ ಒಳಗೊಂಡಂತೆ ವೃತ್ತ ಅಭಿವೃದ್ಧಿಪಡಿಸಲು 100 ಕೋಟಿ ಕಾದಿರಿಸಲಾಗಿದೆ. ಮೊದಲ ಹಂತದಲ್ಲಿ ಐಬಿ ವೃತ್ತ, ಆಲ್ಕೊಳ ವೃತ್ತ, ಶಾಂತಿನಗರ ವೃತ್ತಗಳನ್ನು ಸಿಗ್ನಲ್‌ರಹಿತ ವೃತ್ತಗಳಾಗಿ ಮಾರ್ಪಡಿಸಲು 340 ಲಕ್ಷ ಮೀಸಲಿಡಲಾಗಿದೆ ಎಂದರು.
ಸಂಚಾರ ಸುಗಮಗೊಳಿಸಲು ಪೊಲೀಸ್ ಇಲಾಖೆ ಮಾರ್ಗದರ್ಶನದೊಂದಿಗೆ ವಿವಿಧ ವೃತ್ತಗಳ ಅಭಿವೃದ್ಧಿಗೆ 340 ಲಕ್ಷ ತೆಗೆದಿರಿಸಿದೆ. ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು 150 ಲಕ್ಷ ಮೀಸಲಿಡಲಾಗಿದೆ ಎಂದಿದ್ದಾರೆ.
ನಿರಂತರ ನೀರು: ನಿರಂತರ ನೀರು ಸರಬರಾಜು ಯೋಜನೆಗಾಗಿ 600 ಲಕ್ಷ, ತೇವರಚಟ್ನಹಳ್ಳಿ, ಸಹ್ಯಾದ್ರಿ ನಗರ, ನವುಲೆ ಭಾಗಶಃ ಪ್ರದೇಶ, ಸೋಮಿನಕೊಪ್ಪ, ವಾದಿ-ಎ-ಹುದಾ ಹಾಗೂ ಕುವೆಂಪು ನಗರ ಬಡಾಣೆಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗೆ 900 ಲಕ್ಷ, ಒಳಚರಂಡಿ ಅಭಿವೃದ್ಧಿಗೆ 662 ಲಕ್ಷ, ಮಾರುಕಟ್ಟೆ ನಿರ್ಮಾಣಕ್ಕೆ 1,000 ಲಕ್ಷ ಮೀಸಲಿಡಲಾಗಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು.
ಮಿಳಘಟ್ಟದ ಎಕ್ಸಿಬಿಷನ್ ಗ್ರೌಂಡ್ ಅಭಿವೃದ್ಧಿಗೆ 100 ಲಕ್ಷ, ಪಾರ್ಕ್ ಬಡಾವಣೆ ಕನ್ಸರ್‌ವೆನ್ಸಿ ರಸ್ತೆ ಅಭಿವೃದ್ಧಿಗೆ 2 ಲಕ್ಷ, ಜೈಲು ಸ್ಥಳಾಂತರಿಸಿದ ನಂತರ ಬನ್ನಿ ಮುಡಿಯುವ ಸ್ಥಳ ಅಭಿವೃದ್ಧಿಗಾಗಿ 100 ಲಕ್ಷ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.

ವಿಶೇಷ ಯೋಜನೆ
  ಸರ್ಕಾರಿ ಪಶುವೈದ್ಯ ಕಾಲೇಜು ಮೂಲ ಸೌಕರ್ಯಗಳ ಅಭಿವೃದ್ಧಿಗೆ 136 ಕೋಟಿ ಪ್ರಸ್ತಾವನೆಗೆ ಅನುಮೋದನೆ ದೊರಕಿದ್ದು, 25 ಕೋಟಿ ಬಿಡುಗಡೆ
  ಸವಳಂಗ ರಸ್ತೆ ಡಾಂಬರೀಕರಣಕ್ಕೆ 3.5 ಕೋಟಿ
  ತುಂಗಾ ಚಾನಲ್ ಎರಡೂ ಬದಿ ತಡೆಗೋಡೆ ನಿರ್ಮಾಣ, ಟಿಪ್ಪು ನಗರ, ವಿನೋಬ ನಗರ 60 ಅಡಿ ರಸ್ತೆ, ಲಕ್ಷ್ಮೀ ಟಾಕೀಸ್ ಬಳಿ ಸೇತುವೆ ನಿರ್ಮಾಣ
  ಮಾರ್ಚ್‌ನಿಂದ ನಗರದಲ್ಲಿ ಜೆ ನರ್ಮ್ ಯೋಜನೆಯಡಿ 65 ಸರ್ಕಾರಿ ಸಾರಿಗೆ ಬಸ್ ಸಂಚಾರ ಆರಂಭ
  ನಗರಸಭೆ ಅಭಿವೃದ್ಧಿಪಡಿಸಿದ ಗ್ಯಾಸ್ ಚಿತಾಗಾರ ಸದ್ಯವೇ ಆರಂಭ
  ಸೂಡಾದಿಂದ ಲಗನ ಮಂದಿರ ಎದುರಿನ ರಸ್ತೆ ಅಭಿವೃದ್ಧಿ
  ಹಾಲಿ ಸೂಡಾ ಕಚೇರಿ ವಾಣಿಜ್ಯ ಬಳಕೆಗೆ ಬಿಟ್ಟು, ಸೂಡಾಕ್ಕೆ ಹೊಸ ಕಚೇರಿ ನಿರ್ಮಾಣ, ವಿವಿಧ ಪಾರ್ಕ್‌ಗಳಲ್ಲಿ ಹೈಮಾಸ್ಟ್‌ದೀಪ ಅಳವಡಿಕೆ, ಗೋಪಾಳದ 1 ಎಕರೆ ಭೂಮಿಯಲ್ಲಿ ಮತ್ತು ಕೃಷಿ ನಗರದಲ್ಲಿ ಪಾರ್ಕ್ ಅಭಿವೃದ್ಧಿ, ಊರಗಡೂರಿನಲ್ಲಿ ಹೊಸ ಬಡಾವಣೆ ನಿರ್ಮಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement