ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬರೋರಿಗೆ ಉತ್ಸಾಹ, ಉಳಿಯೋರಿಗೆ ಆತಂಕ

Lingaraj Badiger
Updated On : 3 Jan 2014, 10:54 am

ಕ.ಪ್ರ. ವಾರ್ತೆ, ಶಿವಮೊಗ್ಗ, ಜ.2
ಕರ್ನಾಟಕ ಜನತಾ ಪಕ್ಷವು ತೆರೆಮರೆಯತ್ತ ಸರಿದಿದ್ದು ಬಿ.ಎಸ್. ಯಡಿಯೂರಪ್ಪ ಮಾತೃಪಕ್ಷ ಬಿಜೆಪಿಗೆ ಹಿಂತಿರುಗಿದ್ದಾರೆ.
ಎಲ್ಲರೂ ತಮ್ಮೊಂದಿಗೆ ಬಿಜೆಪಿ ಸೇರುತ್ತಾರೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ, ಮೇಲ್ನೋಟಕ್ಕೆ ಪರಿಸ್ಥಿತಿ ಸುಲಭವಾಗಿಲ್ಲ ಎಂದು ಗೋಚರಿಸುತ್ತಿದೆ. ಬಿಎಸ್‌ವೈ ತವರು ಜಿಲ್ಲೆಯಲ್ಲಿಯೂ ತಳಮಳ ಆರಂಭವಾಗಿದೆ.
ಪ್ರಮುಖವಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ಬಿಜೆಪಿ ಸೇರಲು ಹಿಂದೆಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್. ಜಯಂತ್ ಸಹ ಹೊರಗುಳಿಯುವ ಸೂಚನೆ ನೀಡಿದ್ದಾರೆ. ಕೆಜೆಪಿಯಲ್ಲಿದ್ದಾಗ ಬಿಜೆಪಿಯನ್ನು, ಕೆ.ಎಸ್. ಈಶ್ವರಪ್ಪ ಅವರನ್ನು ತಾರಾಮಾರಿ ಟೀಕಿಸಿದವರು ಏನು ಮಾಡಬೇಕೆಂದು ತಿಳಿಯದೇ ಚಿಂತೆಯಲ್ಲಿದ್ದಾರೆ. ಜಿಲ್ಲೆಯ ಮಟ್ಟಿಗೆ ಕರ್ನಾಟಕ ಜನತಾ ಪಕ್ಷವು ಸಂಪೂರ್ಣವಾಗಿ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎಂದು ಹೇಳುವ ಪರಿಸ್ಥಿತಿ ಇಲ್ಲ.
ಇತ್ತ ಬಿಜೆಪಿಯಲ್ಲಿಯೂ ತಳಮಳ ಇದೆ. ಯಡಿಯೂರಪ್ಪ ಅವರು ತಮ್ಮೊಂದಿಗೆ ಬಿಜೆಪಿ ಸೇರುವ ಕೆಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ. ಈ ರೀತಿ ಸ್ಥಾನಮಾನ ಕೊಡುವಾಗ ಬಿಜೆಪಿಯಲ್ಲಿರುವವರ ನಡುವೆ ಅಸಮಾಧಾನ ಭುಗಿಲೇಳುವುದರಲ್ಲಿ ಅನುಮಾನವಿಲ್ಲ. ಸದ್ಯಕ್ಕಂತೂ ಚಿತ್ರಣ ಗೊಂದಲಪೂರ್ಣವಾಗಿಯೇ ಇದೆ.
ಆದರೆ, ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷವು ಗಳಿಸಿದ ಮತಗಳನ್ನು ಕೈಬಿಡಲು ಬಿಜೆಪಿಗೆ ಇಚ್ಛೆಯಿಲ್ಲ. ಜಿಲ್ಲೆಯಲ್ಲಿ ಕೆಜೆಪಿಯಿಂದ ಗೆದ್ದ ಶಾಸಕರು ಒಬ್ಬರೇ (ಯಡಿಯೂರಪ್ಪ) ಆದರೂ ಉಳಿದೆಲ್ಲಡೆ ಬಿಜೆಪಿ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಎಷ್ಟೇ ಅಸಮಾಧಾನವಿದ್ದರೂ ಕೆಜೆಪಿಯನ್ನು ಸ್ವಾಗತಿಸಲು ಬಿಜೆಪಿ ರೆಡಿಯಾಗಿದೆ.
ಆರ್‌ಎಂಎಂ ಬರೋಲ್ಲ: ಆರ್.ಎಂ. ಮಂಜುನಾಥ ಗೌಡ ಅವರು ಹಿಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ನಂತರ ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಕೆಜೆಪಿ ರಾಜ್ಯ ಉಪಾಧ್ಯಕ್ಷರಾದರು. ವಿಧಾನಸಭೆ ಚುನಾವಣೆಯಲ್ಲಿ ಇವರು ಹಾಗೂ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರ ನಡುವೆ ತೀವ್ರ ಹಣಾಹಣಿಯೇ ನಡೆಯಿತು. ಈಗ ಅವರು ಬಿಜೆಪಿಗೆ ವಾಪಸಾದರೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅವರ ಅಸ್ತಿತ್ವಕ್ಕೆ ತೊಡಕಾಗಲಿದೆ. ಇವರು ಮತ್ತು ಆರಗ ಜ್ಞಾನೇಂದ್ರ ಒಟ್ಟಾಗಿರುತ್ತಾರೆ ಎಂದು ಹೇಳುವುದು ಅಸಾಧ್ಯ. ಅಲ್ಲದೇ ಆರ್.ಎಂ.ಎಂ. ಅವರಿಗೆ ತಾವು ಬಿಜೆಪಿಯಲ್ಲಿದ್ದಾಗ ಸೂಕ್ತ ಸ್ಥಾನಮಾನ, ಗೌರವ ಸಿಗಲಿಲ್ಲ ಎಂಬ ಅಸಮಾಧಾನವೂ ಇದೆ. ಹಾಗಾಗಿ ಅವರು ಬಿಜೆಪಿಗೆ ಬರುವುದಿಲ್ಲ ಎಂದು ಸೂಚ್ಯವಾಗಿ ವ್ಯಕ್ತಪಡಿಸಿದ್ದಾರೆ.
ಇನ್ನು ಬಿ.ಆರ್. ಜಯಂತ್ ಅವರು ಸಹ ಮತ್ತೆ ವಾಪಸಾಗಲು ಇಚ್ಛಿಸಿಲ್ಲ. ಮೂಲತಃ ಅವರು ಸಮಾಜವಾದಿ. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದ್ದರು. ಬಿಎಸ್ ವೈ ಜತೆ ಹೊರಬಂದರು. ಈಗ ಈ ಇಬ್ಬರು ಮುಖಂಡರು ಕಾಂಗ್ರೆಸ್ ನತ್ತ ನೋಡುತ್ತಿದ್ದಾರೆ.
ಮುಖವಿಲ್ಲ: ಕೆಜೆಪಿಯಲ್ಲಿದ್ದರೂ ಬುದ್ದಿವಂತಿಕೆಯಿಂದ ಎರಡೂ ಪಕ್ಷದಲ್ಲಿ ಗೆಳೆಯನ್ನು ಮಾಡಿಕೊಂಡವರು ಬಹಳಷ್ಟು ಮುಖಂಡರಿದ್ದು, ಅವರು ಸಂತೋಷದಿಂದಲೇ ಇದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿಕೊಂಡವರು ಸಹ ಹೋಗಲು ನಿರ್ಧರಿಸಿದ್ದಾರೆ. ಆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎದುರು ಕಾದಾಡಿದ್ದವರು, ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವರು, ನಂತರ ಹಲವು ಸಂದರ್ಭದಲ್ಲಿ ಬಿಜೆಪಿ ಮುಖಂಡರನ್ನು ಪತ್ರಿಕಾಗೋಷ್ಠಿಯಲ್ಲಿ, ಬಹಿರಂಗ ಸಭೆಗಳಲ್ಲಿ ಟೀಕಿಸಿದವರು ಯಾವ ಮುಖ ಇಟ್ಟುಕೊಂಡು ಬಿಜೆಪಿಗೆ ಹೋಗಬೇಕು ಎಂದು ಚಿಂತಿಸುತ್ತಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್ ಸೇರಿದಂತೆ ಹಲವರು ಬಿಜೆಪಿ ವಿರುದ್ಧ ಕಟುವಾಗಿ ಮಾತನಾಡುವ ಸಂದರ್ಭ ಬಂದಾಗಲೆಲ್ಲಾ ಬುದ್ದಿವಂತರಾಗಿದ್ದರು. ತಾವು ಮಾಡಬೇಕಿದ್ದ ಟೀಕೆಗಳಲ್ಲಿ ಬೇರೆಯವರಿಂದ ಮಾಡಿಸುತ್ತಿದ್ದರು. ಈಗ ಬಿಜೆಪಿಯು ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಆಹ್ವಾನಿಸಲು ನಿರ್ಧರಿಸಿದೆ. ಬಿಜೆಪಿ- ಕೆಜೆಪಿ ವಿಲೀನಗಳಿಗೆಯನ್ನು ಎರಡೂ ಪಕ್ಷದವರು ಆತಂಕ- ತಳಮಳದಿಂದ ಕಾಯುತ್ತಿರುವುದು ಸದ್ಯದ ಚಿತ್ರವಾಗಿದೆ.
-ಹೊನ್ನಾಳಿ ಚಂದ್ರಶೇಖರ್
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement