ಯಡೇಹಳ್ಳಿಗೆ ಖಾಸಗಿ ಶಾಲೆ ಬೇಡ
ಶಿವಮೊಗ್ಗ: ಭದ್ರಾವತಿ ತಾಲೂಕು ಯಡೇಹಳ್ಳಿ ಗ್ರಾಮದಲ್ಲಿ ಖಾಸಗಿ ಶಾಲೆ ಆರಂಭಕ್ಕೆ ಅನುಮತಿ ಕೊಡಬಾರದು ಎಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಶಿಕ್ಷಣ ಸಚಿವರನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಯಾವುದೇ ಖಾಸಗಿ ಶಾಲೆ ಇರಲಿಲ್ಲ. ಯಡೇಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ 2013- 14ರಲ್ಲಿ ವಿದ್ಯಾರ್ಥಿಗಳು ಕಡಿಮೆ ಇರುವುದು ವಿಷಾದನೀಯ ಸಂಗತಿ. ಆದರೆ, ಮತ್ತೆ ಖಾಸಗಿ ಶಾಲೆಗೆ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಎದುರಾಗುವುದು ಸಹಜ ಹಾಗೂ ಅನಿವಾರ್ಯ ಎಂದು ಎಸ್‌ಡಿಎಂಸಿ ಅಭಿಪ್ರಾಯಪಟ್ಟಿದೆ.
ಈಗ ಸರ್ಕಾರದ ಸೌಲಭ್ಯಗಳು ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಗಳು ಸಹಾ ಉತ್ತಮವಾಗಿ ನಡೆಯುತ್ತಿವೆ. ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಯಡೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಚಂದನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಅಶೋಕನಗರ-1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಶೋಕ ನಗರ-2 ಸರ್ಕಾರಿ ಶಾಲೆ, ದೊಡ್ಡಸಿಗೆ ಸರ್ಕಾರಿ ಶಾಲೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇಲ್ಲ. ಈ ಮಧ್ಯೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದರೆ, ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.