ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ವಾರ್ಡನ್

Lingaraj Badiger
Updated On : 3 Jan 2014, 10:48 am

ಕ.ಪ್ರ.ವಾರ್ತೆ,ಶಿವಮೊಗ್ಗ, ಜ.2
ನಗರದ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಸಂಚಾರ ನಿಯಂತ್ರಿಸಲು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡರೂ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮಂಡ್ಯ ಮಾದರಿಯಲ್ಲಿ ಟ್ರಾಫಿಕ್ ವಾರ್ಡನ್ ವ್ಯವಸ್ಥೆಯನ್ನು ಶಿವಮೊಗ್ಗ ನಗರದಲ್ಲೂ ಜಾರಿಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಮುಂದಾಗಿದ್ದಾರೆ.
ಹಾಲಿ ಸಂಚಾರಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಹೊಸ ಸಂಚಾರಿ ಠಾಣೆಯನ್ನು ಆರಂಭಿಸಿ ಎರಡು ವಿಭಾಗಗಳನ್ನು ಮಾಡಲಾದರೂ, ಸಿಬ್ಬಂದಿ ಕೊರತೆ ಸಂಚಾರ ನಿಯಂತ್ರಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅದರಲ್ಲೂ ವಿಐಪಿ ಆಗಮಿಸುವ ಸಂದರ್ಭದಲ್ಲಂತೂ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ, ಭವಿಷ್ಯದ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜ ಸೇವೆಯ ಮನಸ್ಸಿರುವವರನ್ನು ಜೋಡಿಸಿ ಸಂಚಾರ ನಿಯಂತ್ರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.
ಸದ್ಯದ ಸನ್ನಿವೇಶದಲ್ಲಂತೂ ನೂತನ ಸಿಬ್ಬಂದಿ ನೇಮಕ ಸಾಧ್ಯವಾಗದ ಮಾತೇ ಸರಿ. ಹಲವು ಬಾರಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಅನುಮೋದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಯು ಸಾರ್ವಜನಿಕ ಸಹಯೋಗದಲ್ಲಿ ಯೋಜನೆ ರೂಪಿಸುವ ಪರ್ಯಾಯ ಮಾರ್ಗಕ್ಕೆ ಮೊರೆ ಹೋಗಿದೆ.
ಟ್ರಾಫಿಕ್ ವಾರ್ಡನ್:  ಸದ್ಯದ ಪರಿಸ್ಥಿತಿಯಲ್ಲಿ 10 ಕಿಲೋ ಮೀಟರ್ ವ್ಯಾಪ್ತಿಯ ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆಯನ್ನು ಸಂಚಾರಿ ಪೊಲೀಸರೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ. ಆದರೆ, ಮುಂದೆ ಆಗಬಹುದಾದ ಬದಲಾವಣೆಯಲ್ಲಿ ಸಾರ್ವಜನಿಕರು ಹಾಗೂ ಸಂಘಸಂಸ್ಥೆ ಸದಸ್ಯರೂ ಸಹ ಸಂಚಾರಿ ನಿಯಂತ್ರಣದಲ್ಲಿ ಸಹಭಾಗಿತ್ವ ನೀಡಲಿದ್ದಾರೆ.
ಪ್ರತಿ ದಿನದ ಸಂಚಾರ ದಟ್ಟಣೆ ಇರುವ ಅವಧಿಯಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ಸಹಕಾರ ನೀಡುವುದು ಮತ್ತು ಸಂಚಾರ ನಿಯಂತ್ರಿಸುವುದು ಟ್ರಾಫಿಕ್ ವಾರ್ಡನ್‌ನ ಕರ್ತವ್ಯವಾಗಿರುತ್ತದೆ. ಟ್ರಾಫಿಕ್ ವಾರ್ಡನ್ ಒಂದು ಸಂಪೂರ್ಣ ಸಾಮಾಜಿಕ ಸೇವೆ. ಇದಕ್ಕಾಗಿ ಯಾವುದೇ ಹಣ, ವೇತನ, ಭತ್ಯೆಯನ್ನು ಇಲಾಖೆ ನೀಡುವುದಿಲ್ಲ. ಆದರೆ, ಟ್ರಾಫಿಕ್ ವಾರ್ಡನ್ ಎಂದು ಗುರುತಿಸಿಕೊಳ್ಳಲು ಸೂಕ್ತ ತರಬೇತಿಯನ್ನು ಇಲಾಖೆಯಿಂದ ಪಡೆಯಬೇಕಾಗುತ್ತದೆ.
ಈ ಕಾರ್ಯದಲ್ಲಿ ಆಸಕ್ತರಾದವರೊಂದಿಗೆ ಸಭೆ ನಡೆಸುವ ಇಲಾಖೆಯು, ಅರ್ಹರನ್ನು ಆಯ್ಕೆ ಮಾಡುತ್ತದೆ. ಅವರ ಶಿಕ್ಷಣ, ವೈಯಕ್ತಿಕ ನಡತೆ, ಹಿನ್ನೆಲೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಆಯ್ಕೆ ನಡೆಸುತ್ತದೆ. ನಂತರ ಬೆಂಗಳೂರಿನ ಯಲಹಂಕದ ಪೊಲೀಸ್ ತರಬೇತಿ ಶಿಬಿರಕ್ಕೆ ಕಳುಹಿಸಿ ಅಲ್ಲಿ ಸೂಕ್ತ ತರಬೇತಿಯನ್ನೂ ಕೊಡಿಸಲಾಗುತ್ತದೆ.
ಹೀಗೆ ತರಬೇತಿ ಪಡೆದುಕೊಳ್ಳುವವರು ಪ್ರತ್ಯೇಕ ಸಮವಸ್ತ್ರವನ್ನೂ ಧರಿಸಬೇಕಾಗುತ್ತದೆ. ಇದು ಜಾರಿಗೆ ಬಂದಲ್ಲಿ ಸಾರ್ವಜನಿಕರಲ್ಲಿ ಸಂಚಾರಿ ವ್ಯವಸ್ಥೆಯ ಅರಿವು ಮೂಡುವುದಲ್ಲದೆ ಸಂಚಾರ ದಟ್ಟಣೆಯೂ ನಿಯಂತ್ರಣಕ್ಕೆ ಬರಲಿದೆ ಎಂಬುದು ಅಧಿಕಾರಿಗಳ ವಿವರಣೆ.
ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಇಲಾಖೆ ಗಂಭೀರವಾಗಿ ಆಲೋಚಿಸುತ್ತಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಈ ವ್ಯವಸ್ಥೆಯಿಂದ ಒಂದಿಷ್ಟು ನೆರವಾಗಲಿದೆ. ಈಗಾಗಲೇ ಬೆಂಗಳೂರು ಮತ್ತು ಮಂಡ್ಯ ನಗರದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಪೊಲೀಸ್ ಸಾರ್ವಜನಿಕರ ಸಹಭಾಗಿತ್ವದಿಂದ ಇಲಾಖೆಗೂ ಸಾಕಷ್ಟು ಅನುಕೂಲವಾಗಲಿದೆ. ಜೊತೆಗೆ ಸಾರ್ವಜನಿಕರಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲು ನೆರವಾಗಲಿದೆ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರ ವಿವರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement