ಗಮನ ಸೆಳೆದ ಯುವ ಸಂಸತ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜ.3
ವಿರೋಧ ಪಕ್ಷದವರು ಅಡಕೆ ನಿಷೇಧ ವಿಷಯವನ್ನು ಪದೇಪದೇ ಪ್ರಸ್ತಾಪಿಸಿದರೂ ಆದ್ಯತೆ ಸಿಗಲಿಲ್ಲ, ತಾಳೆಎಣ್ಣೆ ಸಾಗುವಳಿ, ಉತ್ಪಾದನೆ, ಸಂಸ್ಕರಣೆ ವಿಧೇಯಕದ ಲೋಪಗಳನ್ನು ಎತ್ತಿತೋರಿಸಿದರೂ ಸಹ ಧ್ವನಿಮತದಿಂದ ಅಂಗೀಕಾರ, ತುಮರಿ ಸೇತುವೆ ನಿರ್ಮಿಸುವುದರಿಂದ ನದಿ ಕಲುಷಿತಗೊಳುತ್ತದೆ ಎಂದು ಹೇಳಿದ ಆಡಳಿತ ಪಕ್ಷದ ಸಚಿವ, ಉಡಾಫೆಯಿಂದ ಉತ್ತರ ನೀಡಿದ ಸಾರಿಗೆ ಸಚಿವರನ್ನೇ ಸದನದಿಂದ ಹೊರಕ್ಕೆ ಕಳುಹಿಸಿದ ಸ್ಪೀಕರ್...
ಇವು ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಯುವ ಸಂಸತ್ ಅಧಿವೇಶನದ ಹೈಲೈಟ್ಸ್.
ಗಮನ ಸೆಳೆದ ವಿರೋಧ ಪಕ್ಷದ ನಾಯಕಿ ತೇಜಸ್ವಿನಿ ಸತತ ಪ್ರಶ್ನೆಗಳನ್ನೆಸೆದು ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿದರು. ಮುಖ್ಯಮಂತ್ರಿ ಸೂರಜ್ ಕೆ.ಆರ್. ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಸಚಿವರಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.
ಅಡಕೆ ಪ್ರಸ್ತಾಪ: ವಿರೋಧ ಪಕ್ಷದ ನಾಯಕಿ ತೇಜಸ್ವಿನಿ ಅವರು ಗಮನ ಸೆಳೆಯುವ ಸೂಚನೆ ಮಂಡಿಸುವಾಗ ಅಡಕೆ ನಿಷೇಧದ ಬಗ್ಗೆ ಪ್ರಸ್ತಾಪಿಸಿ, ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರದಿಂದ ಈ ರೀತಿಯ ಪ್ರಸ್ತಾವ ಇಲ್ಲ. ಗುಟ್ಕಾ ನಿಷೇಧ ಮಾತ್ರ ಮಾಡಿದೆ ಎಂದರು. ಇದನ್ನು ವಿಪಕ್ಷ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದಾಗ ಸಭಾಧ್ಯಕ್ಷ ಸುಮಂತ್ ಕುಮಾರ್ ಎಸ್. ಸುಮ್ಮನಿರಿಸಿದರು.
ಇದಾದ ನಂತರ ತಾಳೆಎಣ್ಣೆ ವಿಧೇಯಕ ಮಂಡನೆ ಸಂದರ್ಭದಲ್ಲಿ ಮತ್ತೆ ತೇಜಸ್ವಿನಿ ಅಡಕೆ ವಿಷಯ ಪ್ರಸ್ತಾಪಿಸಿದರು. ಆಗ ಅಧ್ಯಕ್ಷ ಪೀಠದಲ್ಲಿದ್ದ ಉಪ ಸ್ಪೀಕರ್ ಶ್ರೀಲಕ್ಷ್ಮಿ, ತಾಳೆಬೆಳೆ ಬಗ್ಗೆ ಮಾತ್ರ ಚರ್ಚಿಸಿ ಎಂದು ತಡೆದರು.
ಸಚಿವರು ಹೊರಕ್ಕೆ: ಸಾರಿಗೆ ಸಚಿವ ಜೀವನ್ಕುಮಾರ್ ಅವರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರು ಹೊರಕ್ಕೆ ಕಳುಹಿಸಿದರು. ಆದರೆ, ಸಚಿವರನ್ನು ಹೊರಗೆ ಕಳುಹಿಸುವ ಅವಕಾಶ ಸಭಾಧ್ಯಕ್ಷರಿಗೆ ಕಾನೂನಿನ ಪ್ರಕಾರ ಇಲ್ಲ. ಅವರು ತಮ್ಮ ತಪ್ಪನ್ನು ಅರಿತು ಸಚಿವರನ್ನು ಒಳಗೆ ಕರೆದರಾದರೂ ಅವರು ವಾಪಸು ಬರಲಿಲ್ಲ.
ನಕ್ಸಲೀಯರು ಬುದ್ಧನ ಪ್ರತಿಮೆ ನಾಶ ಮಾಡಿದ್ದಾರೆ ಎನ್ನುವುದು ವಿಪಕ್ಷದ ಶುಭಶ್ರೀ ಅವರ ಆಕ್ಷೇಪಣೆ. ಅವರು ದೇವಸ್ಥಾನವನ್ನೂ ನಾಶ ಮಾಡಿದ್ದಾರೆ ಎಂದು ಹರಿಹಾಯ್ದರು. ಮುಖ್ಯಮಂತ್ರಿಗಳು, ಅವರ ಚಟುವಟಿಕೆ ಕಡಿಮೆ ಆಗಿದೆ ಎಂದು ಸಮಜಾಯಿಷಿ ನೀಡಿದರು.
ತೀರ್ಥಹಳ್ಳಿಯ ಮುಖ್ಯರಸ್ತೆ 2 ವರ್ಷದಿಂದ ಅಗಲೀಕರಣ ಆಗಿಲ್ಲ ಎನ್ನುವುದು ಗಾನವಿ ನಾಯರ್ ಆಕ್ಷೇಪಣೆಯಾದರೆ, ಸರ್ವಶಿಕ್ಷ ಅಭಿಯಾನ ಯೋಜನೆ ಸಮರ್ಪಕ ಅನುಷ್ಠಾನ ಆಗಿಲ್ಲ ಎಂದು ಪ್ರೇಮ್ ಕುಮಾರ್ ಆರೋಪಿಸಿದರು. ಬಿಪಿಎಲ್ ಕಾರ್ಡುಗಳು ಉಳ್ಳವರಿಗೆ ಸಿಗುತ್ತಿವೆ ಎಂದು ತೇಜಸ್ವಿನಿ ಟೀಕಿಸಿದರು.
ತುಷಾರ, ಚರಂಡಿ ಕಾಮಗಾರಿ ನಡೆಯುತ್ತಿಲ್ಲ ಎಂದರೆ, ಭೂಮಿಕಾ, ಅಂಗವಿಕಲರು ಹಾಗೂ ವಿಧವೆಯರ ಮಾಸಾಶನ ನೀಡಲು ಪೋಸ್ಟ್ಮನ್ಗಳು ಲಂಚ ಪಡೆಯುತ್ತಿದ್ದಾರೆ ಎಂದರು. ಆರೋಗ್ಯ ಇಲಾಖೆ ಹುದ್ದೆಗಳು ಖಾಲಿ ಇರುವ ಬಗ್ಗೆ ಸರ್ಕಾರದ ಗಮನ ಸೆಳೆದರು.
ಉದ್ಘಾಟನೆ: ಯುವ ಸಂಸತ್ ಸ್ಪರ್ಧೆಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಹೇಮಾ ಪಾವನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಸಿ.ಬಸವರಾಜಪ್ಪ, ಶಿಕ್ಷಣಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಶಾಖಾಧಿಕಾರಿ ಎನ್.ಐ. ಕೇಶವಮೂರ್ತಿ ಆಗಮಿಸಿದ್ದರು. 85 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಾಜ್ಯ ಮಟ್ಟಕ್ಕೆ ಆಯ್ಕೆ
ಯುವ ಸಂಸತ್ ಸ್ಪರ್ಧೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ತೀರ್ಥಹಳ್ಳಿ ಸರ್ಕಾರಿ ಬಾಲಿಕಾ ಪ.ಪೂ. ಕಾಲೇಜಿನ ತೇಜಸ್ವಿನಿ ಎಸ್. ಹಾಗೂ ಶಿವಮೊಗ್ಗದ ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ ಅಗಸ್ತ್ಯ ಮೊದಲೆರಡು ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಿಳ್ಳಂಗಿರಿಯ ಸರ್ಕಾರಿ ಪ್ರೌಢಶಾಲೆಯ ಸಿ.ಪೂಜಾ, ತೀರ್ಥಹಳ್ಳಿಯ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಡಯಾನ ಮಾರ್ಟಿಸ್, ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಪ್ರೌಢಶಾಲೆಯ ಶ್ರೀಲಕ್ಷ್ಮೀ ಅವರು ಕ್ರಮವಾಗಿ ನಂತರದ 3 ಸ್ಥಾನ ಪಡೆದಿದ್ದಾರೆ.