'ಜೀವನ ಸುಧಾರಣೆಗೆ ಭಗವದ್ಗೀತೆ ಪಠಿಸಿ'
ಹೊಸನಗರ: ಅವಿರತ ದುಡಿಮೆ, ಒತ್ತಡ, ಜಂಜಾಟಗಳ ನಡುವೆ ಕೊನೆ ಪಕ್ಷ ಭಗವದ್ಗೀತೆಯ 16ನೇ ಅಧ್ಯಾಯವನ್ನು ಪಠಣ ಮಾಡುವುದು ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮಾರ್ಗದರ್ಶಿ ಎಂದು ಸ್ವರ್ಣವಲ್ಲಿ ಸಂಸ್ಥಾನದ ಶ್ರೀಗಳಾದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಇಲ್ಲಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀಮದ್ ಭಗವದ್ಗೀತೆ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದಿನ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಅದರಲ್ಲಿ ಅಪ್ರಾಪ್ತ ವಯಸ್ಕರೂ ಭಾಗಿಯಾಗುತ್ತಿರುವುದು ಅತ್ಯಮತ ಖೇದಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಹೊಸನಗರ ತಾಲೂಕು ಶ್ರೀಮದ್ ಭಗವದ್ಗೀತಾ ಪುನಶ್ಚೇತನ ಅಭಿಯಾನದ ಅಧ್ಯಕ್ಷ ಡಾ. ಶಾಂತಾರಾಮ ಪ್ರಭು, ಕಾರ್ಯದರ್ಶಿ ಹನಿಯ ರವಿ, ಸಂಚಾಲಕ ರಮೇಶ್ ಹಲಸಿನ ಕಟ್ಟೆ, ತಿರುಜ್ಞಾನ ಫೌಂಡೇಷನ್ ಅಧ್ಯಕ್ಷೆ ಕೆ.ಎಲ್. ರೋಹಿಣಿ, ಗುರೂಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ದತ್ತಾತ್ರೇಯ ಆರ್. ಕಾರ್ಯದರ್ಶಿ ಶಾಂತಮೂರ್ತಿ, ಸದಾಶಿವ ಶ್ರೇಷ್ಠಿ, ನಾಗೇಶ್, ಡಿ.ಎಂ. ವಿಜಯೇಂದ್ರ ಶೇಟ್ ಮುಂತಾದವರು ಹಾಜರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳು ಭಗವದ್ಗೀತೆಯ 13ನೇ ಅಧ್ಯಾಯವನ್ನು ಪಠಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.