ಪ್ರತಿಭೆಗೆ ಪೂರಕ ಶಿಕ್ಷಣ ಅಗತ್ಯ: ಐಜಿಪಿ
ಕ.ಪ್ರ.ವಾರ್ತೆ ಶಿವಮೊಗ್ಗ ಜ. 3
ಪ್ರತಿಭೆ ಯಾವ ದೇಶದಲ್ಲಿ, ಯಾವ ಸಮಯದಲ್ಲಿ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದೆ. ಅದರ ಏಳ್ಗೆಗೆ ಅಗತ್ಯವಾದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಡಾ. ಎಸ್. ಪರಶಿವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ಶಾಲೆಯ ಶಾಲಾ ಹಬ್ಬದ ಮೂರನೇ ದಿನದ ಮಕ್ಕಳ ರಂಗೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು, ಪ್ರತಿಯೊಬ್ಬರಲ್ಲೂ ಮಹಾನ್ ಚೇತನಗಳಾಗುವ ಸಾಮರ್ಥ್ಯವಿದೆ. ಅದಕ್ಕಾಗಿ ನಿರಂತರ ಪರಿಶ್ರಮ ಮುಖ್ಯ. ಜೀವನದ ಉದ್ದೇಶ ಮೂರು ಹೊತ್ತು ಆಹಾರ ಗಳಿಕೆಯಲ್ಲ. ಮನುಷ್ಯತ್ವ ಮತ್ತು ಮಾನವೀಯತೆ ಬೆಳೆಸಿಕೊಳ್ಳುವ ಮೂಲಕ ಬೌದ್ಧಿಕ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಬೇಕು. ಜ್ಞಾನ ಸಾಗರ ಬಹು ದೊಡ್ಡದಿದೆ. ಅದನ್ನು ತಮ್ಮದಾಗಿಸಿಕೊಂಡು ದೇಶ ಮತ್ತು ಸಮಾಜದ ಏಳ್ಗೆಗೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಶ್ರೀಮದ್ ರಂಭಾಪುರಿ ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಡಿಪಿಐ ಬಸವರಾಜಪ್ಪ, ಸಂಸ್ಥೆಯ ಹಳೆಯ ವಿದ್ಯಾರ್ಥಿ ಉದ್ಯಮಿ ಸಿ.ಕೆ. ಧನಂಜಯ, ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್, ಸಂಸ್ಥೆಯ ಕಾರ್ಯದರ್ಶಿ ಡಿ.ಎಂ. ವೆಂಕಟರಮಣ, ರಂಜಿತಾ, ಆಕಾಂಕ್ಷಾ, ಪ್ರತೀಕ್ಷಾ, ಸ್ವಪ್ನಾ ಮತ್ತು ಸುಮನ್, ಗಜೇಂದ್ರನಾಥ್ ಮತ್ತಿತರರು ಇದ್ದರು.