ಸಂಚಾರ: ವೈಜ್ಞಾನಿಕ ವೇಳಾಪಟ್ಟಿಗೆ ಆಗ್ರಹ
ಶಿವಮೊಗ್ಗ: ಜೆ.ಎನ್ ನರ್ಮ್ ಯೋಜನೆಯಡಿ ನಗರದಲ್ಲಿ ಸರ್ಕಾರಿ ಬಸ್ಗಳ ಸಂಚಾರ ಆರಂಭವಾಗಲಿದ್ದು, ಇದಕ್ಕೂ ಮುನ್ನ ವೈಜ್ಞಾನಿಕ ವೇಳಾಪಟ್ಟಿ ಸಿದ್ದಪಡಿಸುವಂತೆ ನಗರ ಸಾರಿಗೆ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ. ರುದ್ರೇಶ್ ಒತ್ತಾಯಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಖಾಸಗಿ ನಗರ ಸಾರಿಗೆ ವ್ಯವಸ್ಥೆ ತನ್ನ ಸೇವೆ ಸಲ್ಲಿಸುತ್ತಿದೆ. ಇದೀಗ ಸರ್ಕಾರಿ ಸಿಟಿ ಬಸ್ ಸಂಚಾರಕ್ಕೆ ಮುಂದಾಗಿದೆ. ಇದರಿಂದ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಚರ್ಚಿಸಬೇಕು ಎಂದು ಆಗ್ರಹಿಸಿದರು. ನಗರದ ವಿವಿಧ ಬಡಾವಣೆಗೆ ಸಂಚರಿಸುವ ನಗರ ಸಾರಿಗೆ ಬಸ್ಗಳು ನಗರದ ಹೃದಯಭಾಗವಾದ ನೆಹರು ರಸ್ತೆಯಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ಪ್ರತಿ 1ರಿಂದ 3 ನಿಮಿಷ ಅಂತರದಲ್ಲಿ 1, 280 ಬಾರಿ ಸಂಚರಿಸುತ್ತವೆ. ಹೀಗಿರುವಾಗ 65 ಸರ್ಕಾರಿ ಸಾರಿಗೆ ಬಸ್ಗಳ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿ. ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿ ಜಿ. ಮುರುಗೇಶ್, ಸಹಕಾರ್ಯದರ್ಶಿ ಪಾಲ್ ಗೊವಿಸ್ ಮತ್ತಿತರರು ಇದ್ದರು.
ಇಂದು ಸಭೆ
ಸೊರಬ: ಶಾಸಕ ಎಸ್. ಮಧುಬಂಗಾರಪ್ಪ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಜ.4ರಂದು ಬೆಳಗ್ಗೆ 9.30ಕ್ಕೆ ಪಟ್ಟಣದ ದುರ್ಗಾಂಬಾ ಹಾಗೂ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಬೆಳಗ್ಗೆ 10 ಗಂಟೆಗೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿರುವ ಕೃಷಿ ಉತ್ಸವ- 2014ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಮ. 12ಕ್ಕೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯುವ ಟಾಸ್ಕ್ಫೋರ್ಸ್ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವರ ಆಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಗೀತ ಹಬ್ಬ
ಶಿವಮೊಗ್ಗ: ಶ್ರೀ ಗುರುಕೃಪ ಗಾನ ಮಂದಿರವು ಹತ್ತನೇ ವರ್ಷದ ಸಂಗೀತ ಹಬ್ಬವನ್ನು ಜನವರಿ 5ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದೆ. ಬೆಳಿಗ್ಗೆ 8.30ರಿಂದ ರಾತ್ರಿ 10 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಉದ್ಘಾಟಿಸುವರು. ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ತಾರಾನಾಥ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕಲಾ ಸಾಧಕರಾದ ಪಂಡಿತ್ ಜಯತೀರ್ಥ ಮೇವುಂಡಿ, ನಾಗಲಿಂಗಾಚಾರ್ ಗವಾಯಿ, ದ್ಯಾವನಹಳ್ಳಿ ಚೌಡಪ್ಪ ದಾಸರು, ವಿದ್ವಾನ್ ದತ್ತಮೂರ್ತಿ ಭಟ್, ಗಂಗಾಧರ ಶಾಸ್ತ್ರಿಯವರನ್ನು ಸನ್ಮಾನಿಸಲಾಗುತ್ತಿದೆ.