ಸಾರಿಗೆ ದರ ವ್ಯತ್ಯಾಸ: ಆಕ್ಷೇಪ
ಕ.ಪ್ರ.ವಾರ್ತೆ ಶಿವಮೊಗ್ಗ ಜ. 3
ಒಂದೇ ದೂರ, ಎರಡು ದರ, ಏಕೆ ಈ ಥರ ಎಂಬ ಶೀರ್ಷಿಕೆಯಲ್ಲಿ 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮೂರು ಪ್ರಮುಖ ಪಕ್ಷಗಳ ಮೂವರು ಶಾಸಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್, ಬಿಜೆಪಿಯ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಖಾಸಗಿ ಬಸ್ಸುಗಳು ಓಡಾಡುವ ಮಾರ್ಗದಲ್ಲಿ ಸರ್ಕಾರಿ ಸಾರಿಗೆ ಬಸ್ಗಳು ಕಡಿಮೆ ದರ ವಿಧಿಸಿದರೆ, ಬೇರೆ ಮಾರ್ಗದಲ್ಲಿ ಇಷ್ಟೇ ದೂರಕ್ಕೆ ಹೆಚ್ಚು ದರ ವಿಧಿಸುತ್ತಿರುವ ಬಗ್ಗೆ -ಕನ್ನಡಪ್ರಭ- ಬೆಳಕು ಚಲ್ಲಿತ್ತು.
ಶಾಸಕರ ಆಕ್ಷೇಪ: ಇದನ್ನು ಆಕ್ಷೇಪಿಸಿರುವ ಶಾಸಕರು, ಪ್ರಯಾಣ ದರದಲ್ಲಿ ತಾರತಮ್ಯ ನೀತಿ ಅನುಸರಿಸುವುದು ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಶೋಭೆ ತರುವುದಿಲ್ಲ. ಈ ಸಾರಿಗೆಯನ್ನೇ ನಂಬಿರುವ ಪ್ರಯಾಣಿಕರಿಗೆ ಕಿರಿಕಿರಿ ಕೊಡುವುದು ಸರಿಯಲ್ಲ. ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಯಾವುದೇ ಪ್ರದೇಶಕ್ಕೆ ಪ್ರಯಾಣಿಸುವ ಜನರಿಗೆ ಒಂದೇ ಪ್ರಯಾಣ ದರ ನಿಗದಿ ಮಾಡುವುದು ನ್ಯಾಯೋಚಿತ ಎಂದು ಹೇಳಿದ್ದಾರೆ.
ಈ ವಿಷಯವನ್ನು ಮುಂಬರುವ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲಾ ವಾಣಿಜ್ಯ ಸಂಘದ ಕಾರ್ಯದರ್ಶಿ ಪಿ. ರುದ್ರೇಶ್ ಸಹ ಸಾರಿಗೆ ಸಂಸ್ಥೆಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಯಾಣಿಕರಿಗೆ ಈ ರೀತಿ ಸಾರಿಗೆ ಸಂಸ್ಥೆ ಮೋಸ ಮಾಡುವುದು ಸರಿ ಅಲ್ಲ. ಆದ್ದರಿಂದ ಕೂಡಲೇ ಏಕ ರೀತಿಯ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.