16ರಂದು ಗುಲಾಂ ನಭಿ ಭೇಟಿಗೆ ಅಡಕೆ ನಿಯೋಗ
ಶಿವಮೊಗ್ಗ: ಅಡಕೆ ನಿಷೇಧ ಕುರಿತಂತೆ ಸುಪ್ರೀಂಕೋರ್ಟ್ ಮನವೊಲಿಸಲು, ಅಗತ್ಯ ದಾಖಲೆ ಸಲ್ಲಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಜ.16ರಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಭಿ ಅಜಾದ್ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡುವುದಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಸುಪ್ರೀಂಕೋರ್ಟ್ ಎದುರು ಲಿಖಿತ ಹೇಳಿಕೆ ಸಲ್ಲಿಸಿ ಅಡಕೆ ಹಾನಿಕರ ಎಂದು ಹೇಳಿರುವುದರಿಂದ ಅಡಕೆ ನಿಷೇಧವಾಗುವ ಆತಂಕ ಬೆಳೆಗಾರರಲ್ಲಿ ಬಂದಿದೆ. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರವು ಕೂಡಲೇ ಅಡಕೆಯು ಔಷಧಿಯುಕ್ತ ಗುಣ ಹೊಂದಿರುವ ಬಗ್ಗೆ, ಅಡಕೆ ಹಾನಿಕರ ಅಲ್ಲ ಎಂದು ಹೇಳಿರುವ ವರದಿಗಳನ್ನು ಕೂಡಲೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಡಕೆ ನಿಷೇಧ ಸಮಸ್ಯೆ ಉದ್ಭವಿಸಿದ ನಂತರ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವರು ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಪ್ರಕರಣವನ್ನು ಪ್ರತಿನಿಧಿಸಲು ತಜ್ಞ ವಕೀಲರನ್ನು ನೇಮಿಸುವಂತೆ ರಾಜ್ಯ ಕಾನೂನು ಸಚಿವರಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಅಡಕೆ ಬೆಳೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ವಕೀಲರನ್ನು ನೇಮಿಸಬೇಕು ಹಾಗೂ ಕೂಡಲೇ ಸಂಸ್ಕರಿಸಿದ ಅಡಕೆಯನ್ನು ಪರೀಕ್ಷೆಗೆ ಒಳಪಡಿಸಿ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿ ಕೋರ್ಟ್ಗೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೇರಳಕ್ಕೆ ನಿಯೋಗ: ಅಡಕೆ ಬೆಳೆಯುವ ರಾಜ್ಯಗಳಲ್ಲಿ ಕೇರಳವೂ ಪ್ರಮುಖವಾಗಿದ್ದು, ಈ ಸಂಬಂಧ ಜ.23 ಹಾಗೂ 24ರಂದು ಕೇರಳ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ತಿರುವನಂತಪುರಂನಲ್ಲಿ ನಿಯೋಗದೊಂದಿಗೆ ತೆರಳಿ ಭೇಟಿ ಮಾಡಲಾಗುವುದು ಎಂದರು. ಕೇರಳ ರಾಜ್ಯ ಮುಖ್ಯಮಂತ್ರಿ, ಕೇಂದ್ರ ಸಚಿವ ವಯಲಾರ್ ರವಿ ಸೇರಿದಂತೆ ಹಲವು ಪ್ರಮುಖರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಲಾಗುದು ಎಂದರು.
ಸಾಲ ಮನ್ನಾ ಚಿಂತನೆ: ರಾಜ್ಯ ಸರ್ಕಾರವು ಅಡಕೆ ಬೆಳೆಗಾರರ ದೀರ್ಘಾವಧಿ, ಮಧ್ಯಮಾವಧಿ ಸಾಲ ಮನ್ನ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಸದ್ಯವೇ ಬ್ಯಾಂಕರ್ ಗಳ ಸಭೆ ಕರೆಯಲಿದೆ ಎಂದು ಮಂಜುನಾಥ ಗೌಡ ಹೇಳಿದರು.