'ಆಟೋ ಪ್ರಯಾಣ ದರ ಏರಿಸಿ'
ಶಿವಮೊಗ್ಗ: ಆಟೋರಿಕ್ಷಾ ಪ್ರಯಾಣ ದರವನ್ನು ತಕ್ಷಣದಿಂದಲೇ ಹೆಚ್ಚಿಸುವಂತೆ ಶಿವಮೊಗ್ಗ ತಾಲೂಕು ಆಟೋ ಚಾಲಕರ ಮತ್ತು ಮಾಲಿಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಶನಿವಾರ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯನವರಿಗೆ ಮನವಿ ಅರ್ಪಿಸಿದ ಸಂಘದ ಸದಸ್ಯರು, ತಮ್ಮ ಆತಂಕವನ್ನು ತೋಡಿಕೊಂಡರು. ಇತ್ತೀಚಿನ ದಿನಗಳಲ್ಲಿ ಆಟೋ ಎಲ್ಪಿಜಿ ದರ ಹಾಗೂ ಆಟೋ ಬಿಡಿಭಾಗಗಳು ಅತಿಯಾಗಿ ಹೆಚ್ಚಾಗಿರುವುದರಿಂದ ಹಾಗೂ ಹೊಸದಾಗಿ ನೀಡುತ್ತಿರುವ ಓಪನ್ ಪರ್ಮಿಟ್ಗಳಿಂದ ದಿನದ ಬಾಡಿಗೆ ಮಾಡಿ ಖರ್ಚು ತೆಗೆದು ಸಂಸಾರ ನಡೆಸುವುದು ಕಷ್ಟವಾಗಿದೆ. ದಿನವೊಂದಕ್ಕೆ 100 ಉಳಿಸುವುದೂ ದುಸ್ತರವಾಗಿದೆ. ಹೀಗಾಗಿ ನಮ್ಮ ಮನವಿಯನ್ನು ಗಂಭೀರವಾಗಿ ಪರಿಣಿಸುವಂತೆ ಕೋರಿದರು. ತಕ್ಷಣವೇ ಆಟೋರಿಕ್ಷಾ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್ಗೆ 13 ನಿಗದಿ ಮಾಡಬೇಕು, ತಕ್ಷಣವೇ ಹೊಸದಾಗಿ ಪರ್ಮಿಟ್ ನೀಡುವ ಕಾರ್ಯವನ್ನು ಕೈಬಿಡಬೇಕು, ಜೊತೆಗೆ ಖಾಯಂ ಆಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಕೆ. ರಾಮು, ಮುನೇಶ್ವರ, ಮಂಜುನಾಥ, ಕುಮಾರ್ ಸಿಂಗ್, ಶಿವಕುಮಾರ್ ಮತ್ತಿತರರು ಇದ್ದ ರು.