ಗಿರಿರಾಜ ಕೋಳಿ ತಳಿ ವರದಾನ
ಸಾಗರ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವಿಷ್ಕರಿಸಿದ ಗಿರಿರಾಜ ಕೋಳಿ ತಳಿಯು ಹಿತ್ತಲ ಕೋಳಿ ಸಾಕುವವರಿಗೆ ವರದಾನ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್ ಗಂಟೆ ಹೇಳಿದರು. ಇಲ್ಲಿನ ಪಶುಪಾಲನಾ ಇಲಾಖೆ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಗ್ರಾಮೀಣ ಹಿತ್ತಲ ಕೋಳಿ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ವಿವಿಧ ಫಲಾನುಭವಿಗಳಿಗೆ ಗಿರಿರಾಜ ಕೋಳಿಮರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಹಾಯಕ ನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ, ಸದರಿ ಯೋಜನೆಯಡಿ ಗ್ರಾಮ ಪಂಚಾಯ್ತಿಗಳಿಂದ ಆಯ್ಕೆಗೊಂಡ 128 ಫಲಾನುಭವಿಗಳಿಗೆ 6 ವಾರಗಳ ತಲಾ 12 ಕೋಳಿ ಮರಿಗಳನ್ನು ವಿತರಿಸಲಾಗಿದೆ. ಮಲೆನಾಡಿನ ವಾತಾವರಣಕ್ಕೆ ಸೂಕ್ತವಾದ ಈ ತಳಿಗಳನ್ನು ಯಾವುದೇ ಸಂಕಷ್ಟಗಳಿಲ್ಲದೆ ಸಾಕಬಹುದು. ಸಲಹೆ ಸೂಚನೆ ಅಗತ್ಯವಾಗಿದ್ದರೆ ಇಲಾಖೆಯ ವೈದ್ಯರು ಸದಾ ಜನರಿಗೆ ಲಭ್ಯರಿರುತಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಡಾ. ಎನ್.ಎಚ್. ಶ್ರೀಪಾದರಾವ್, ಡಾ.ನಂದಕುಮಾರ್ ಪೈ, ಡಾ.ಮೋಹನ ಹಾಗೂ ಪಶು ವೈದ್ಯಾಧಿಕಾರಿಗಳು ಇದ್ದರು.