ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳಿಗೆ ಸರ್ವೋದಯ ನೀತಿಬೋಧನೆ

Rashmi Kasaragodu
Updated On : 5 Jan 2014, 12:40 pm

ಶ್ರೀಕಾಂತ್ ಭಟ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.4
ಮರೆಯಾಗುತ್ತಿರುವ ಸರ್ವೋದಯ ಪರಿಕಲ್ಪನೆಯನ್ನು ಇಂದಿನ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಜನವರಿ ಮಾಸ ಪೂರ್ತಿ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಉಪನ್ಯಾಸ, ಸಂವಾದ, ವಿಚಾರಗೋಷ್ಠಿ, ಸ್ಪರ್ಧೆಗಳು, ಶ್ರಮದಾನ, ಪ್ರತಿಜ್ಞಾ ವಿಧಿ ಸೇರಿದಂತೆ ಬಗೆಬಗೆಯ ಮಾರ್ಗದಲ್ಲಿ ಸರ್ವೋದಯ ತತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಶಿಕ್ಷಣ ಇಲಾಖೆ ಕಾರ್ಯಕ್ರಮ ರೂಪಿಸಿದೆ.
ಗಾಂಧಿ ಮೌಲ್ಯ ಪರಿಚಯ: ದಿನ ಕಳೆದಂತೆ ಮಹಾತ್ಮಾ ಗಾಂಧಿಯವರ ಮಾರ್ಗ ಮತ್ತು ಮೌಲ್ಯಗಳು ಜನಜೀವನಕ್ಕೆ ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಪೀಳಿಗೆಗೆ ತೀರಾ ಪರಕೀಯವಾಗುತ್ತಿವೆ. ಗಾಂಧಿಜಿಯವರ ಚರಿತ್ರೆ, ಸ್ವಾತಂತ್ರ್ಯ ಸಂಪಾದನೆಯಲ್ಲಿ ಅವರ ಪಾತ್ರ ತಿಳಿಯಲು ಅಲ್ಪ-ಸ್ವಲ್ಪ ಅವಕಾಶ ಇರಬಹುದಾದರೂ, ಅವರ ಶಿಷ್ಟ ಹಾಗೂ ವಿಶಿಷ್ಟ ಮಾರ್ಗ ಮತ್ತು ಮೌಲ್ಯಗಳನ್ನು ಪರಿಚಯಿಸುವ ಅವಕಾಶ, ವ್ಯವಸ್ಥೆ ಇಲ್ಲ.  ಸ್ಥಿತ್ಯಂತರ ಮಾರ್ಗ ಮತ್ತು ಮೌಲ್ಯಗಳ ಪರಿಚಯ ಹಾಗೆಯೇ ಅವರು ಪ್ರತಿಪಾದಿಸಿದ ಸರ್ವೋದಯ ಸಮಾಜದ ಕಲ್ಪನೆ ಮತ್ತು ಅದರ ಪ್ರಸ್ತುತತೆ ತಿಳಿಸುವ ಪ್ರಯತ್ನ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಕರ್ನಾಟಕ ಸರ್ವೋದಯ ಮಂಡಲ ಸರ್ಕಾರವನ್ನು ಕೋರಿತ್ತು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಒಂದು ತಿಂಗಳ ಯೋಜನೆ ರೂಪಿಸಿ ಸುತ್ತೋಲೆ ಹೊರಡಿಸಿದೆ.
ಸರ್ವೋದಯ ಮಾಸ: ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರೌಢಶಾಲೆಗಳಲ್ಲಿ ಜನವರಿಯನ್ನು ಸರ್ವೋದಯ ತಿಂಗಳನ್ನಾಗಿ ಹಾಗೂ ಜನವರಿ 30ರಂದು ಸರ್ವೋದಯ ದಿನಾಚರಣೆಯನ್ನಾಗಿ ಆಚರಿಸಲು ಹಾಗೂ ವಿವಿಧ ಚಟುವಟಿಕೆ ಪ್ರತಿಜ್ಞಾ ಸ್ವೀಕಾರ ಮಾಡಲು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಯಾವ ವಿಷಯ?: ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕಿರುವ ಸಂಗತಿಗಳ ಪೈಕಿ ಮುಖ್ಯ ಅಂಶವೆಂದರೆ, ವ್ಯಕ್ತಿಯ ಹಿತ, ಆತನಿರುವ ಒಟ್ಟು ಸಮಾಜದ ಹಿತದಲ್ಲಿ ಅಡಗಿದೆ (ಎಲ್ಲರ ಹಿತದಲ್ಲಿ ತನ್ನ ಹಿತ ಅಡಗಿದೆ), ನಾಯಿಂದನ ವೃತ್ತಿಗೂ ನ್ಯಾಯಾಧೀಶನ ವೃತ್ತಿಗೂ ಸಮಾನ ಗೌರವ ತೋರಿಸಬೇಕು (ಕಾಯಕಗಳೆಲ್ಲವೂ ಸಮಾನವಾದವುಗಳು), ಶ್ರಮಾಧಾರಿತ ಜೀವನವೇ ಶ್ರೇಷ್ಠ ಜೀವನ (ಶ್ರಮ ಸಂಸ್ಕೃತಿಯೇ ಉತ್ತಮ ಸಂಸ್ಕೃತಿ ವಿಚಾರವಾಗಿ ಕಾರ್ಯಕ್ರಮ ರೂಪುಗೊಳಿಸಲಾಗಿದೆ.
ಸರ್ವೋದಯ ಸಮಾಜದ ಪರಿಕಲ್ಪನೆ ಪರಿಚಯಾತ್ಮಕ ಉಪನ್ಯಾಸ (ಶಾಲೆಯ ಉಪಾಧ್ಯಾಯರೂ ಸೇರಿದಂತೆ ಸ್ಥಾನೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು), ಸರ್ವೋದಯ ಗೀತೆಗಳ ಪರಿಚಯ ಮತ್ತು ಹಾಡುಗಾರಿಕೆ, ವಿನೋಬಾ ಭಾವೆ ಮತ್ತು ಭೂದಾನ ಚಳವಳಿ ಕುರಿತು ಉಪನ್ಯಾಸ, ಶ್ರಮದಾನ, ಸಂಪತ್ತಿನ ದಾನ ಮತ್ತು ಗ್ರಾಮರಾಜ್ಯ-ಸ್ವರಾಜ್ಯಗಳ ಪರಿಕಲ್ಪನೆ, ಚಂಬಲ್ ಕಣಿವೆಯ ಡಕಾಯಿತರನ್ನು ಪರಿವರ್ತಿಸಿದ ಪವಾಡ, ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಯ ಪರಿಚಯ ಮಾಡಿಕೊಡಲಾಗುತ್ತದೆ.
ಶ್ರಮದಾನ: ಅದೇ ರೀತಿ, ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛಗೊಳಿಸುವುದು, ಊರಿನ ಬೀದಿಗಳಲ್ಲಿ, ವಿಶೇಷವಾಗಿ ನೀರೊದಗಿಸುವ ತಾಣಗಳ ಸುತ್ತಮುತ್ತ, ದೇವಾಲಯ ಮತ್ತು ಪ್ರಾರ್ಥನಾ ಮಂದಿರಗಳ ಆವರಣ ಸ್ವಚ್ಛಗೊಳಿಸುವುದು.  ಸಾಧ್ಯವಾದರೆ ಸ್ವಚ್ಛತಾ ಕಾರ್ಯಕ್ಕಾಗಿ ದತ್ತು ತೆಗೆದುಕೊಳ್ಳುವುದು. ಸರ್ವೋದಯ ಗೀತೆಗಳ ಹಾಡುಗಾರಿಕೆ ಸ್ಪರ್ಧೆ ಏರ್ಪಡಿಸುವುದು (ವಿಶೇಷವಾಗಿ 8 ಮತ್ತು 9ನೇ ತರಗತಿಯವರಿಗೆ, ಪ್ರಾಯೋಜಕರಿಗೆ ಬಹುಮಾನ ನೀಡುವುದು) ಸಂವಾದ, ವಿಚಾರಗೋಷ್ಠಿಗಳನ್ನು ನಡೆಸುವುದು.
ಪ್ರಬಂಧ ಆಹ್ವಾನ: ನೆರೆಹೊರೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಕುರಿತು ಸಂವಾದ ಆಯೋಜನೆ, ಉತ್ತಮ ಸಮಾಜದ ಪರಿಕಲ್ಪನೆ ಮತ್ತು ಸಾಧನೆ ವಿದ್ಯಾರ್ಥಿಗಳಿಂದ ಪ್ರಾರಂಭವಾಗಬೇಕು ವಿಚಾರವಾಗಿ ಪ್ರಬಂಧ ಆಹ್ವಾನಿಸುವುದು, ಪ್ರೋತ್ಸಾಹಿಸುವುದು. ಅಂತಿಮವಾಗಿ ಜ.30 ರಂದು ಸರ್ವೋದಯ ದಿನದಂದು ಪ್ರತಿಜ್ಞೆ ಸ್ವೀಕಾರ ಮಾಡಲಾಗುತ್ತದೆ.
1857ರಿಂದ 1947ರವರೆಗಿನ 90 ವರ್ಷಗಳ ಅವಧಿಯಲ್ಲಿ ಸಾರಿದ ಸ್ವಾತಂತ್ರ್ಯ ಆಂದೋಲನದಲ್ಲಿ ತಮ್ಮದಾದ ಎಲ್ಲವನ್ನೂ ತೆತ್ತು ಹುತಾತ್ಮರಾದವರೆಲ್ಲರ ಪವಿತ್ರ ಸ್ಮರಣೆಯಲ್ಲಿ, ನಾವು ಸರಳ ಮತ್ತು ಪ್ರಾಮಾಣಿಕ ಜೀವನ ಸಾಗಿಸುತ್ತೇವೆ, ನಮ್ಮ ನಡೆ-ನುಡಿಗಳ ಸಮನ್ವಯತೆಯ ಕಾಪಾಡಿಕೊಳ್ಳುತ್ತೇವೆ. ಎಲ್ಲರಿಂದ ನಾವು, ಎಲ್ಲರಿಗಾಗಿ ನಾವು ಎಂದು ಬಾಳುತ್ತೇವೆ. ಸಂಪಾದನೆ ಮತ್ತು ಸ್ಥಾನಗಳನ್ನು ಅನುಭವಿಸುವ ಸಂದರ್ಭದಲ್ಲಿ ಕಟ್ಟಕಡೆಯವರ ಹಿತ ಕಾಪಾಡುತ್ತೇವೆ. ಹುತಾತ್ಮರಾದವರು ಕಾಣಬಯಸಿದ ಸ್ವದೇಶೀ, ಸ್ವಾವಲಂಬೀ ಮತ್ತು ಸ್ವಾಭಿಮಾನೀ ರಾಷ್ಟ್ರದ ಶಿಷ್ಟ ಪ್ರಜೆಗಳಾಗಿ ಬಾಳುತ್ತೇವೆ. ಹಾಗೆಯೇ ಬಾಳಿಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement