ಸಂಭ್ರಮದ ಹೆಡಿಗೆ ಜಾತ್ರೆ
ಸೊರಬ: ಪಟ್ಟಣದ ಹಿರೇಶಕುನದ ದುರ್ಗಾಂಬಾ, ಮಾರಿಕಾಂಬಾ ದೇವಿ ಜಾತ್ರೆ ಹಿನ್ನೆಲೆ ಗ್ರಾಮಸ್ಥರು ಹೆಡಿಗೆ ಜಾತ್ರೆ ನಡೆಸಿದರು. ಫೆ.4 ರಿಂದ 12ರವರೆಗೆ ಜಾತ್ರೆ ನಡೆಯಲಿದ್ದು, ಪರಂಪರಾನುಗತ ಆಚರಣೆಯಂತೆ ಜಾತ್ರಾ ಮಹೋತ್ಸವಕ್ಕೂ ಮೊದಲು ಪಟ್ಟಣದ ಮತ್ತು ಹಿರೇಶಕುನ ಗ್ರಾಮದ ಹಿರಿಯರು, ಮಹಿಳೆಯರ ಸಮ್ಮುಖ ಹೊರಬೀಡಿನಲ್ಲಿ ಹೆಡಿಗೆ ಜಾತ್ರೆ ನಡೆಸುತ್ತಾರೆ. ದೇವಿಗೆ ಪೂಜೆ ಸಲ್ಲಿಸಿದ ನಂತರ ಪಪಂ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಸಿದರು. ನಂತರ ಹೆಡಿಗೆಯಲ್ಲಿ ಎಡೆ ಹೊತ್ತು ಹಿರೇಶಕುನ ಗ್ರಾಮದ ಗಡಿ ಪ್ರದೇಶವಾದ ಸದಾಶಿವ ಮಲ್ಲಪ್ಪ ದೇವಸ್ಥಾನದ ಹತ್ತಿರ ಗಡಿ ಮಾರಮ್ಮನನ್ನು ಪ್ರತಿಷ್ಠಾಪಿಸಿ, ವಿವಿಧ ಸಿಹಿ ಖಾದ್ಯಗಳನ್ನು ಎಡೆ ಇರಿಸಿದರು. ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿ ಜಾತ್ರೆಗೆ ಚಾಲನೆ ನೀಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಉಪಾಧ್ಯಕ್ಷ ಎಂ.ಡಿ. ಉಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ದಾನಶೇಖರ, ಖಜಾಂಚಿ ಜಿ. ಪ್ರಶಾಂತ್ ಮೇಸ್ತ್ರಿ, ಗ್ರಾಮ ಸಮಿತಿ ಅಧ್ಯಕ್ಷ ದೇವಪ್ಪ, ಸಮಿತಿ ಸದಸ್ಯ ಸಣ್ಣಬೈಲ್ ಪರಶುರಾಮಪ್ಪ, ರಘು, ಸೋಮಪ್ಪ, ಮಾರುತಿ, ಮಹಾದೇವಪ್ಪ, ಜಾಕ್ಷಪ್ಪ ಇದ್ದರು.